News Karnataka Kannada
Thursday, May 16 2024
ಬೀದರ್

ಸಮಾವೇಶದಷ್ಟು ಮರಾಠ ಸಮಾಜ ಸಣ್ಣದಲ್ಲ: ರಾಧಾ ಮೋಹನದಾಸ್‌

'ಭಾಲ್ಕಿಯಲ್ಲಿ ಬುಧವಾರ ಸಣ್ಣ ಪ್ರಮಾಣದಲ್ಲಿ ಮರಾಠ ಜನಜಾಗೃತಿ ಸಮಾವೇಶ ನಡೆದಿದೆ. ಆದರೆ, ಮರಾಠ ಸಮಾಜ ಜಿಲ್ಲೆಯಲ್ಲಿ ಅಷ್ಟು ಸಣ್ಣದಲ್ಲ. ಅದೊಂದು ದೊಡ್ಡ ಸಮಾಜವಾಗಿದೆ. ಆ ಸಮಾಜದ ಎಲ್ಲರೂ ಭಾಗವಹಿಸಿದ್ದರೆ ಅದೊಂದು ಐತಿಹಾಸಿಕ ಸಮಾವೇಶ ಆಗಿರುತ್ತಿತ್ತು' ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್‌ ಅಗರವಾಲ್‌ ಅಭಿಪ್ರಾಯಪಟ್ಟರು.
Photo Credit : NewsKarnataka

ಬೀದರ್: ‘ಭಾಲ್ಕಿಯಲ್ಲಿ ಬುಧವಾರ ಸಣ್ಣ ಪ್ರಮಾಣದಲ್ಲಿ ಮರಾಠ ಜನಜಾಗೃತಿ ಸಮಾವೇಶ ನಡೆದಿದೆ. ಆದರೆ, ಮರಾಠ ಸಮಾಜ ಜಿಲ್ಲೆಯಲ್ಲಿ ಅಷ್ಟು ಸಣ್ಣದಲ್ಲ. ಅದೊಂದು ದೊಡ್ಡ ಸಮಾಜವಾಗಿದೆ. ಆ ಸಮಾಜದ ಎಲ್ಲರೂ ಭಾಗವಹಿಸಿದ್ದರೆ ಅದೊಂದು ಐತಿಹಾಸಿಕ ಸಮಾವೇಶ ಆಗಿರುತ್ತಿತ್ತು’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್‌ ಅಗರವಾಲ್‌ ಅಭಿಪ್ರಾಯಪಟ್ಟರು.

‘ಕೆಲ ಬಿಜೆಪಿಯ ಮರಾಠ ಮುಖಂಡರೇ ಸಮಾಜದ ಸಮಾವೇಶ ಏರ್ಪಡಿಸಿ, ಬೇಡಿಕೆಗಳನ್ನು ಮುಂದಿಟ್ಟಿರುವ’ ಕುರಿತು ಪತ್ರಕರ್ತರು ನಗರದಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಮರಾಠ ಸಮಾಜದ ಕಣ ಕಣದಲ್ಲಿ ದೇಶಭಕ್ತಿ, ರಾಷ್ಟ್ರವಾದಿ ವಿಚಾರಗಳು ತುಂಬಿವೆ. ಅವರು ಬಿಜೆಪಿಗೆ ಮತ ಹಾಕಲ್ಲ, ದೇಶಕ್ಕೆ ಮತ ಹಾಕುತ್ತಾರೆ. ಈ ದೇಶದಲ್ಲಿ ಬಿಜೆಪಿ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡು ಕೆಲಸ ಮಾಡುತ್ತಿದೆ. ರಾಷ್ಟ್ರವಾದವೇ ಬಿಜೆಪಿಯ ಅಜೆಂಡಾ. ದೇಶ ಮೊದಲು, ಪಕ್ಷ ಆನಂತರದ್ದು ಎಂಬ ಭಾವನೆ ನಮ್ಮದು ಎಂಬುದು ಮರಾಠಿಗರಿಗೆ ಗೊತ್ತಿದೆ. ಯಾರಾದರೂ ಬಿಜೆಪಿಯಿಂದ ದೂರ ಸರಿಯಬಹುದು. ಆದರೆ, ಮರಾಠಿಗರು ಬಿಜೆಪಿ ಬಿಟ್ಟು ಬೇರೆಲ್ಲೂ ಹೋಗಲ್ಲ. ಆ ಸಮಾವೇಶದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಆ ಸಮಾವೇಶ ಇಡೀ ಮರಾಠ ಸಮಾಜವನ್ನು ಸಂಪೂರ್ಣವಾಗಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದರು.

ಎರಡು ಸಲ ಬೀದರ್‌ನಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದೇನೆ. ಜನರಲ್ಲಿ, ಬಿಜೆಪಿ-ಜೆಡಿಎಸ್‌ ಮುಖಂಡರು, ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದೆ. ಈ ಸಲ ಬೀದರ್‌ ಲೋಕಸಭೆ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ. ಹತ್ತು ವರ್ಷಗಳಲ್ಲಿ ಮೋದಿಯವರು ಮಾಡಿದ ಮಹತ್ವದ ಕೆಲಸಗಳು ಕೈಹಿಡಿಯಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ನಾನು ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿದ್ದೇನೆ. ಬಹುತೇಕ ಎಲ್ಲ ಕ್ಷೇತ್ರಗಳಿಗೆ ಭೇಟಿ ಕೊಟ್ಟಿರುವೆ. ಬಿಜೆಪಿ- ಜೆಡಿಎಸ್‌ ಪಕ್ಷದ ಮುಖಂಡರನ್ನು ಭೇಟಿ ಮಾಡಿರುವೆ. ಮಂಗಳೂರು, ಮೈಸೂರಿನಲ್ಲಿ ನೆಲೆಸಿರುವ ಉತ್ತರ ಭಾರತೀಯರೊಂದಿಗೆ ಮಾತನಾಡಿದ್ದೇನೆ. ಜೂನ್‌ 4ರಂದು ಫಲಿತಾಂಶ ಬಂದಾಗ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ 28 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್‌ 2109ರಲ್ಲಿ ಗೆದ್ದಿದ್ದ ಬೆಂಗಳೂರು ಗ್ರಾಮೀಣದಲ್ಲೂ ಹೀನಾಯ ಸೋಲು ಕಾಣಲಿದೆ. ಐತಿಹಾಸಿಕ ಗೆಲುವಿನ ನಂತರ ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಮಾರ್ಗ ತೆರೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.

ಮಾಧುಸ್ವಾಮಿ ಅವರೊಂದಿಗೆ ನನ್ನ ಉತ್ತಮ ಸ್ನೇಹ ಇದೆ. ನಾನು ಅವರೊಂದಿಗೆ ಬಹಳ ಸಲ ಮಾತನಾಡಿದ್ದೇನೆ. ಅವರು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಅವರು ಪಕ್ಷ ತೊರೆಯುತ್ತಾರೆ ಎನ್ನುವುದು ಗಾಳಿ ಸುದ್ದಿ. ಇದು ಕೂಡ ರಾಜಕೀಯ ಕುತಂತ್ರದ ಭಾಗ. ಮಾಲೀಕಯ್ಯ ಗುತ್ತೇದಾರ್‌ ಸಹ ಎಲ್ಲಿಗೂ ಹೋಗಲ್ಲ. ರಾಜಕೀಯದಲ್ಲಿ ಯಾರು ಯಾರನ್ನೂ ಬೇಕಾದರೂ ಭೇಟಿ ಮಾಡಬಹುದು. ಅದಕ್ಕೆ ತಪ್ಪು ಅರ್ಥ ಕಲ್ಪಿಸಬೇಕಿಲ್ಲ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪೂರೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌, ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಜೆಡಿಎಸ್‌ ಮುಖಂಡರಾದ ಬಂಡೆಪ್ಪ ಕಾಶೆಂಪುರ್‌, ಮಲ್ಲಿಕಾರ್ಜುನ ಖೂಬಾ, ಬಿಜೆಪಿ ಮುಖಂಡರಾದ ಈಶ್ವರ ಸಿಂಗ್‌ ಠಾಕೂರ್‌, ಪ್ರಕಾಶ ಖಂಡ್ರೆ ಹಾಜರಿದ್ದರು.

ಪ್ರಭು ಚವಾಣ್‌ ಹೃದಯ ಬಡಿತ ಪ್ರತಿ ನಿಮಿಷಕ್ಕೆ 220‘: ‘ಔರಾದ್‌ ಬಿಜೆಪಿ ಶಾಸಕ ಪ್ರಭು ಚವಾಣ್‌ ಅವರು ನಮ್ಮೊಂದಿಗೆ ಇದ್ದಾರೆ. ನಾನು ವೃತ್ತಿಯಿಂದ ವೈದ್ಯನಾಗಿದ್ದೇನೆ. ನಾನು ಅವರ ಆಸ್ಪತ್ರೆಯ ದಾಖಲೆಗಳನ್ನು ನೋಡಿದ್ದೇನೆ. ಅವರ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅವರ ಹೃದಯ ಬಡಿತ ಪ್ರತಿ ನಿಮಿಷಕ್ಕೆ 220 ಇದೆ. ಅದಕ್ಕೆ ಸೂಕ್ತ ಚಿಕಿತ್ಸೆ ಕೊಡದಿದ್ದಲ್ಲಿ ಅದರಿಂದ ಅವರಿಗೆ ಸಮಸ್ಯೆ ಆಗಬಹುದು’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್‌ ಅಗರವಾಲ್‌ ಹೇಳಿದರು.

ಒಬ್ಬ ವ್ಯಕ್ತಿಗೆ ಹೃದಯ ಸಮಸ್ಯೆ ಇರುವಾಗ, ಚಿಕಿತ್ಸೆ ಪಡೆಯುವಾಗ ಅವರ ಬಗ್ಗೆ ಅಮಾನವೀಯವಾಗಿ ನಡೆದುಕೊಳ್ಳಬಾರದು. ಅವರು ಆರೋಗ್ಯವಂತರಾಗಬೇಕು. ಚಿಕಿತ್ಸೆ ಅಪೂರ್ಣವಾಗಿ ಬಿಟ್ಟು ಅವರು ಮಧ್ಯದಲ್ಲಿಯೇ ಪ್ರಚಾರಕ್ಕೆ ಬರಬೇಕೆಂದು ನಾವು ಬಯಸುವುದಿಲ್ಲ. ಅವರ ಮನಸ್ಸು ಒಂದು ಕಡೆ ಪ್ರಚಾರ ಮಾಡಲು ಬಯಸುತ್ತಿದೆ. ಇನ್ನೊಂದೆಡೆ ಅವರ ಹೃದಯದ ಸಮಸ್ಯೆ ಅವರನ್ನು ತಡೆಯುತ್ತಿದೆ. ಅವರು ಬೇಗ ಗುಣಮುಖರಾಗಿ ಅವರು ಪ್ರಚಾರಕ್ಕೆ ಬರಲೆಂದು ಬಯಸಿದ್ದೇವೆ. ಜನರು ಏನಾದರೂ ಮಾತನಾಡುತ್ತಾರೆ. ಜನರ ಕೆಲಸವೇ ಮಾತನಾಡುವುದು. ಜನ ಮಾತಾಡುವುದು ಹಾಗೂ ಒಬ್ಬ ವೈದ್ಯ ಮಾತನಾಡುವುದರ ನಡುವೆ ವ್ಯತ್ಯಾಸ ಇದೆ ಎಂದು ಹೇಳುವುದರ ಮೂಲಕ ಯಾವುದೇ ಭಿನ್ನಮತ ಇಲ್ಲ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನಿಂದ ಚುನಾವಣೆಗೆ ಬಾಲಕರ ಸೈನ್ಯ’: ‘ಬಾಲಕರ ಸೈನ್ಯವನ್ನು ಕಾಂಗ್ರೆಸ್‌ನವರು ಚುನಾವಣೆಗೆ ನಿಲ್ಲಿಸಿದ್ದಾರೆ. ಬೀದರ್‌ ಲೋಕಸಭಾ ಕ್ಷೇತ್ರವನ್ನೇ ನೀವು ಉದಾಹರಣೆಗೆ ತೆಗೆದುಕೊಳ್ಳಬಹುದು. ಬಾಲಕರ ಮೇಲೆ ನಾವು ಅಸ್ತ್ರ ಬಿಡುವುದು, ಅವರನ್ನು ನಮ್ಮ ಪ್ರತಿಸ್ಪರ್ಧಿ ಎಂದು ಪರಿಗಣಿಸುವುದೇ? ಅವರನ್ನು ನಮ್ಮ ಪ್ರತಿಸ್ಪರ್ಧಿ ಎಂದು ಪರಿಗಣಿಸುವುದಿಲ್ಲ. ಹೆಚ್ಚಿನವರು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದ್ದಾರೆ’ ಎಂದು ರಾಧಾ ಮೋಹನದಾಸ್‌ ಅಗರವಾಲ್‌ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು