News Karnataka Kannada
Thursday, May 02 2024
ಬೀದರ್

ಖಂಡ್ರೆ ಪರಿವಾರದ ವಿರುದ್ಧ ಹಲವು ಕೊಲೆ ಆರೋಪಗಳಿವೆ: ಸಚಿವ ಭಗವಂತ ಖೂಬಾ

'ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಪರಿವಾರದ ವಿರುದ್ಧ ಅನೇಕ ಕೊಲೆ ಆರೋಪಗಳಿವೆ. ಅವುಗಳಿಗೆ ಖಂಡ್ರೆದ್ವಯರು ಉತ್ತರ ಕೊಡಬೇಕು' ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು.
Photo Credit : NewsKarnataka

ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಪರಿವಾರದ ವಿರುದ್ಧ ಅನೇಕ ಕೊಲೆ ಆರೋಪಗಳಿವೆ. ಅವುಗಳಿಗೆ ಖಂಡ್ರೆದ್ವಯರು ಉತ್ತರ ಕೊಡಬೇಕು’ ಎಂದು ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು.

ನಗರದ ಗಣೇಶ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಖಂಡ್ರೆ ಪರಿವಾರದವರ ವಿರುದ್ಧ ವಾಕ್ಪ್ರಹಾರ ನಡೆಸಿದರು.

‘ಭಾಲ್ಕಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಹತ್ಯೆ ಯಾರ ಅಂಗಳದಲ್ಲಿ ನಡೆದಿದೆ? ಸಾಗರ್‌ ಖಂಡ್ರೆಯವರು ಈ ಪ್ರಶ್ನೆಯನ್ನು ಅವರ ತಂದೆಗೆ ಕೇಳಬೇಕು. ಜಿಲ್ಲೆಯ ದಲಿತರಿಗೆ ಉತ್ತರಿಸಬೇಕು. ಸುರೇಶ ಖೇಡ ನಿಮ್ಮ ಮನೆ (ಖಂಡ್ರೆ) ಅಂಗಳದಲ್ಲಿ ಜೀವ ಬಿಟ್ಟಿದ್ದಾರೆ. ನಿಮ್ಮ ತಂದೆ ಮೇಲೆ ಎಫ್‌ಐಆರ್‌ ಆಗಿತ್ತು. ಆಗ ಅವರು ಪರಾರಿಯಾಗಿದ್ದರು. ನೀವು ವಕೀಲರಲ್ಲವೇ ಹಾಗಿದ್ದರೆ ಅದಕ್ಕೆ ಉತ್ತರ ಕೊಡಿ’ ಎಂದು ಸಾಗರ್‌ ಖಂಡ್ರೆಗೆ ಒತ್ತಾಯಿಸಿದರು.

‘ಹೈಕೋರ್ಟ್‌ ಈಶ್ವರ ಖಂಡ್ರೆಯವರಿಗೆ ₹5 ಲಕ್ಷ ದಂಡ ಏಕೆ ಹಾಕಿದೆ ಎನ್ನುವುದು ಗೊತ್ತಿದೆಯೇ? ಯಾಕೆಂಬುದು ಜಿಲ್ಲೆ ಜನರಿಗೆ ತಿಳಿಸಬೇಕು. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಖಂಡ್ರೆ ಪರಿವಾರದವರು ನನ್ನ ಮೇಲೆ ಅನವಶ್ಯಕ ಆರೋಪಗಳನ್ನು ಮಾಡುತ್ತಿದ್ದಾರೆ. ಬಹಿರಂಗ ಚರ್ಚೆಗೆ ಕರೆಯುತ್ತಿದ್ದಾರೆ. ಇದು ಹಾಸ್ಯಾಸ್ಪದ’ ಎಂದರು.

ನಕಲಿ ಬಸ್‌ ಟಿಕೆಟ್‌ ಮುದ್ರಿಸಿದ ಹಗರಣ ಯಾರ ಅವಧಿಯಲ್ಲಿ ನಡೆದಿದೆ. ಕಾರಂಜಾ ಯೋಜನೆ ಇನ್ನೂ ನಡೀತಾನೆ ಇದೆ. ರೈತರ ಹೊಲಗಳಿಗೇಕೆ ನೀರು ಹರಿದಿಲ್ಲ. ಪ್ರತಿವರ್ಷ ಕಾಲುವೆಗಳ ದುರಸ್ತಿ ನಡೆಯುತ್ತಲೇ ಇದೆ. ಏನಿದು ನಿಮ್ಮ ರಾಜಕಾರಣ?’ ಎಂದು ಪ್ರಶ್ನಿಸಿದರು.

‘ಎಂಜಿಎಸ್‌ಎಸ್‌ಕೆ ನಿಮ್ಮ ಕಾಕನವರ ಅಧೀನದಲ್ಲಿದೆ. ಏನೂ ಇಲ್ಲದ ವ್ಯಕ್ತಿ ಸಾವಿರಾರು ಕೋಟಿ ರೂಪಾಯಿ ಒಡೆಯರಾಗಿದ್ದು ಹೇಗೆ? ರೈತರ ಕಬ್ಬಿನ ಹಣ ಪೋಲಾಗಿದೆ. ನಿಮ್ಮ ಕರಿ ಕಲ್ಲಿನ ಕೌಂಪಾಂಡ್‌ಗಳು ಬೆಳೆದಿವೆ. ಬೀದರ್‌ ಡಿಸಿಸಿ ಬ್ಯಾಂಕ್‌ ಇವರ ತೆಕ್ಕೆಗೆ ಹೋದ ನಂತರ ಮೊದಲ ಸಲ ಐ.ಟಿ. ದಾಳಿ ನಡೆದಿದೆ. ಸುಮ್ಮನೆ ದಾಳಿ ನಡೆಯುವುದಿಲ್ಲ. ಏನಾದರೂ ಮಾಹಿತಿ ಆಧರಿಸಿಯೇ ಮಾಡಿರಬಹುದು’ ಎಂದು ಹೇಳಿದರು.

‘ಹುಡುಗ ಸಾಗರ್‌ ಖಂಡ್ರೆಗೆ ಇನ್ನೂ ಫಸಲ್‌ ಬಿಮಾ ಯೋಜನೆಯ ಬಗ್ಗೆ ಗೊತ್ತಿಲ್ಲ. ಕ್ರೈಸ್ಟ್‌ ವಿ.ವಿ.ಯಲ್ಲಿ ಓದಿದವರಿಗೆ ರೈತರ ಬಗ್ಗೆ ಮಾತನಾಡಿ ನಗೆಪಾಟಲಿಗೀಡಾಗಿದ್ದಾರೆ. ₹1200 ಕೋಟಿ ರೈತರ ಖಾತೆಗೆ ಜಮೆ ಆಗಿದೆ ಎನ್ನುವುದು ನಿಮಗೆ ತಿಳಿದಿರಲಿ’ ಎಂದರು.

ನಾನು ಜಿಲ್ಲೆಗೆ ಏನು ಮಾಡಿದ್ದೇನೆ ಎಂದು ಪದೇ ಪದೇ ಪ್ರಶ್ನಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ₹1 ಲಕ್ಷ ಕೋಟಿಗೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಸಿದ್ದೇನೆ. ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ ಸುರಕ್ಷತಾ ಯೋಜನೆಯ ಪ್ರಯೋಜನ ಸಿಕ್ಕಿದೆ. ಮೂಲಸೌಕರ್ಯ ನಾಲ್ಕು ಪಟ್ಟು ಹೆಚ್ಚಾಗಿದೆ. 2014ರ ಮುಂಚೆ ಬೀದರ್‌ ಹಿಂದುಳಿದ ಜಿಲ್ಲೆಯಾಗಿತ್ತು. ಈಗ ಹಾಗಿಲ್ಲ. ಮುಂದಿನ ಐದು ವರ್ಷಗಳಲ್ಲಿ ಬೀದರ್‌ ಜಿಲ್ಲೆಯನ್ನು ಅಭಿವೃದ್ಧಿ ಪಟ್ಟಿಗೆ ಸೇರಿಸುವ ಗ್ಯಾರಂಟಿ ಕೊಡುವೆ. ಕಣ್ಣು, ಕಿವಿಯಿಲ್ಲದ ಖಂಡ್ರೆಯವರು ಅನವಶ್ಯಕ ಆರೋಪಗಳನ್ನು ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌ ಮಾತನಾಡಿ, ‘ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳು ಎಲ್ಲ 28 ಸ್ಥಾನಗಳಲ್ಲಿ ಗೆಲ್ಲಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಒಂದು ಸ್ಥಾನದಲ್ಲಿ ಗೆದ್ದಿತ್ತು. ಈ ಸಲ ಆ ಸ್ಥಾನವೂ ಕಳೆದುಕೊಳ್ಳಲಿದೆ. ಒಬ್ಬ ಮಂತ್ರಿಯೂ ಚುನಾವಣೆಗೆ ಸ್ಪರ್ಧಿಸಲು ಧೈರ್ಯ ತೋರಿಲ್ಲ. ತಮ್ಮ ಕುರ್ಚಿ ಗಟ್ಟಿ ಇಟ್ಟುಕೊಂಡು ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿದ್ದಾರೆ’ ಎಂದು ಕುಟುಕಿದರು.

ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ‘ಭಾಲ್ಕಿಯಲ್ಲಿ ಮನೆ ಮನೆಗೆ ತಿರುಗಿ ಭಿಕ್ಷೆ ಬೇಡಿ ಕಟ್ಟಿದ ಸಂಸ್ಥೆಯನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ತೋಳ್ಬಲದಿಂದ ಡಿಸಿಸಿ ಬ್ಯಾಂಕ್‌ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಹಣ ಬಲ ಇರುವವರಿಗೆ ಜನ ಬೆಂಬಲಿಸಬೇಕಾ? ಅಥವಾ ಜನ ನಾಯಕರನ್ನು ಬೆಂಬಲಿಸಬೇಕಾ ಎಂಬುದನ್ನು ಜನ ನಿರ್ಧರಿಸಬೇಕು’ ಎಂದು ಈಶ್ವರ ಖಂಡ್ರೆಯವರು ಹೆಸರು ಪ್ರಸ್ತಾಪಿಸದೆ ಹೇಳಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಶರಣು ಸಲಗರ, ಅವಿನಾಶ ಜಾಧವ್‌, ಶಶಿಲ್‌ ನಮೋಶಿ, ಮುಖಂಡರಾದ ರೇವಣಸಿದ್ದಪ್ಪ ಜಲಾದೆ, ಕಿರಣ್‌ ಪಾಟೀಲ, ಸೂರ್ಯಕಾಂತ ನಾಗಮಾರಪಳ್ಳಿ, ಪ್ರಕಾಶ ಖಂಡ್ರೆ, ಸುಭಾಷ ಗುತ್ತೇದಾರ್‌, ಎಂ.ಜಿ.ಮುಳೆ, ಈಶ್ವರ ಸಿಂಗ್‌ ಠಾಕೂರ್‌, ಜೈಕುಮಾರ ಕಾಂಗೆ, ಶಿವಾನಂದ ಮಂಠಾಳಕರ, ಬಾಬುವಾಲಿ, ರೌಫೋದ್ದಿನ್‌ ಕಚೇರಿವಾಲೆ, ರಾಜಶೇಖರ ನಾಗಮೂರ್ತಿ, ಡಿ.ಕೆ. ಸಿದ್ರಾಮ, ಐಲಿನ್‌ ಜಾನ್‌ ಮಠಪತಿ, ಲತಾ, ಮಲ್ಲಿಕಾರ್ಜುನ ಖೂಬಾ, ಪೀರಪ್ಪ ಯರನಳ್ಳೆ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು