News Karnataka Kannada
Wednesday, May 08 2024
ಬೀದರ್

ಬೀದರ್ : ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ , ₹724 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ

Bidar: Hi-tech touch to bidar railway station, upgraded at a cost of Rs 724 crore
Photo Credit : News Kannada

ಬೀದರ್‌: ದಕ್ಷಿಣ ಮಧ್ಯ ರೈಲ್ವೆಗೆ ಸೇರಿದ ಬೀದರ್‌ ರೈಲು ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ ಕೊಡಲು ನಿರ್ಧರಿಸಲಾಗಿದೆ. ರೈಲ್ವೆ ಇಲಾಖೆಯ ‘ಅಮೃತ ಭಾರತ ನಿಲ್ದಾಣ’ ಯೋಜನೆಯಡಿ ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯ ಒಟ್ಟು 27 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ.

ಇದರಲ್ಲಿ ಬೀದರ್‌ ರೈಲು ನಿಲ್ದಾಣ ಕೂಡ ಸೇರಿರುವುದು ವಿಶೇಷ. ‘ಅಮೃತ ಭಾರತ ನಿಲ್ದಾಣ’ ಯೋಜನೆಯಡಿ ಬೀದರ್‌ ರೈಲು ನಿಲ್ದಾಣದಲ್ಲಿ ಅತ್ಯುತ್ತಮ ಸಕಲ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹24.40 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ನಿಲ್ದಾಣದ ಅಭಿವೃದ್ಧಿ ಕಾರ್ಯ ಕಾಮಗಾರಿಗಳಿಗೆ ಆಗಸ್ಟ್‌ 6ರಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಮೂಲಕ ಚಾಲನೆ ನೀಡುವರು.

ಯೋಜನೆಯಡಿ ಪ್ರಮುಖವಾಗಿ ನಿಲ್ದಾಣದ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ನಿಲ್ದಾಣದ ಮುಂಭಾಗ ಸಂಪೂರ್ಣ ಬದಲಾಗಲಿದ್ದು, ಪ್ರವೇಶ ದ್ವಾರದಲ್ಲಿ ವಿಶಾಲವಾದ ಪೋರ್ಟಿಕೊ ಬರಲಿದೆ. ಆಯಾ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ, ವಾಹನ ದಟ್ಟಣೆ ಉಂಟಾಗದ ರೀತಿಯಲ್ಲಿ ಇಡೀ ಪ್ರದೇಶದ ಅಭಿವೃದ್ಧಿ, 12 ಮೀಟರ್‌ ಅಗಲವಾದ ಮೇಲ್ಸೇತುವೆ, ಪ್ಲಾಟ್‌ಫಾರಂಗಳು ಸುಧಾರಣೆ ಕಾಣಲಿವೆ. ಹಾಲಿ ಶೌಚಾಲಯಗಳನ್ನು ಅಭಿವೃದ್ಧಿ ಪಡಿಸಿ, ಇನ್ನಷ್ಟು ಹೊಸ ಶೌಚಾಲಯ ಬ್ಲಾಕ್‌ಗಳು ನಿರ್ಮಾಣವಾಗಲಿವೆ. ನಿರೀಕ್ಷಣಾ (ವೇಟಿಂಗ್‌) ಕೊಠಡಿಗಳ ಸುಧಾರಣೆ, ಎರಡು ಹೊಸ ಲಿಫ್ಟ್‌, ಮೂರು ಎಸ್ಕಲೇಟರ್‌ಗಳು ನಿರ್ಮಾಣಗೊಳ್ಳಲಿವೆ. ಇದರಿಂದಾಗಿ ಇಡೀ ನಿಲ್ದಾಣಕ್ಕೆ ಹೊಸ ಮೆರುಗು ಸಿಗಲಿದೆ. ಪ್ರಯಾಣಿಕರ ಸುಗಮ ಓಡಾಟಕ್ಕೂ ಸಹಕಾರಿಯಾಗಲಿದೆ.

ನಿತ್ಯ ಎಷ್ಟು ರೈಲು ಸಂಚಾರ?: ಬೀದರ್‌ ರೈಲು ನಿಲ್ದಾಣದ ಮೂಲಕ ನಿತ್ಯ 10 ರಿಂದ 12 ರೈಲುಗಳು ಸಂಚರಿಸುತ್ತವೆ. ಕೆಲವು ರೈಲುಗಳು ವಾರಕ್ಕೊಮ್ಮೆ ಸಂಚರಿಸುತ್ತವೆ. ಹೈದರಾಬಾದ್‌ ಇಂಟರ್‌ಸಿಟಿ, ಕಲಬುರಗಿ-ಬೀದರ್‌ ಡೆಮು, ಮಚಲಿಪಟ್ಟಣ, ಬೆಂಗಳೂರು, ಮುಂಬೈ (ವಾರದಲ್ಲಿ ಮೂರು ದಿನ ಸಂಚಾರ), ಕೊಲ್ಲಾಪುರ (ವಾರಕ್ಕೆ ಒಂದು ದಿನ ಸಂಚಾರ) ಈ ರೈಲುಗಳು ನಿತ್ಯ ಬೀದರ್‌ನಿಂದಲೇ ಸಂಚರಿಸುತ್ತವೆ.

ಇನ್ನು, ಶಿರಡಿ, ಔರಾಂಗಾಬಾದ್‌, ಬೆಂಗಳೂರು, ಪೂರ್ಣ, ಪುಣೆ, ನಾಂದೇಡ್‌, ಲಾತೂರ್‌ ಸೇರಿದಂತೆ ಇತರೆ ಭಾಗಗಳಿಗೂ ರೈಲುಗಳು ಹಾದು ಹೋಗುತ್ತವೆ. ಬೀದರ್‌ ರೈಲು ನಿಲ್ದಾಣದ ಮೂಲಕ ನಿತ್ಯ ಸರಾಸರಿ 8ರಿಂದ 10 ಸಾವಿರ ಜನ ವಿವಿಧ ನಗರಗಳಿಗೆ ಹೋಗಿ ಬರುತ್ತಾರೆ. ಏಕಾದಶಿ, ದಸರಾ, ದೀಪಾವಳಿ, ಗುರುನಾನಕ ಜಯಂತಿ, ಕ್ರೈಸ್ತರ ಧಾರೂರ ಜಾತ್ರೆ ಸಂದರ್ಭದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ವಾರಾಂತ್ಯ, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

‘ವಾಯಾ ಕಲಬುರಗಿ ಮೂಲಕ ಬೀದರ್‌-ಬೆಂಗಳೂರು ನಡುವೆ ರೈಲು ಓಡಿಸಬೇಕೆಂಬ ಬೇಡಿಕೆಯಿದ್ದು, ಶೀಘ್ರವೇ ಈ ಮಾರ್ಗದಲ್ಲಿ ಹೊಸ ರೈಲು ಬಿಡಲಾಗುತ್ತದೆ. ಬೀದರ್‌-ನಾಂದೇಡ್‌ ಹೊಸ ರೈಲು ಮಾರ್ಗ ಮಂಜೂರಾಗಿದ್ದು, ಅದಕ್ಕೆ ₹2,354 ಕೋಟಿ ಅನುದಾನ ನಿಗದಿಪಡಿಸಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮ ಆಗಸ್ಟ್‌ 6ರಂದು ಬೆಳಿಗ್ಗೆ 9.30ಕ್ಕೆ ಬೀದರ್‌ ರೈಲು ನಿಲ್ದಾಣದ ಮುಂಭಾಗದಲ್ಲಿ ನಡೆಯಲಿದೆ. ಅದಾದ ನಂತರ ಕೆಲಸ ತ್ವರಿತ ಗತಿಯಲ್ಲಿ ಆರಂಭಗೊಂಡು 2024ರ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ‘ನಾನು ಸಂಸದನಾದ ಬಳಿಕ ಬೀದರ್‌ನಿಂದ 13 ಹೊಸ ರೈಲುಗಳನ್ನು ಪ್ರಾರಂಭಿಸಿದ್ದೇನೆ. ತೆಲಂಗಾಣದ ವಿಕಾರಾಬಾದ್‌ನಿಂದ ಮಹಾರಾಷ್ಟ್ರದ ಪರಳಿವರೆಗೆ ₹262.12 ಕೋಟಿಯಲ್ಲಿ 269 ಕಿ.ಮೀ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಮಂಜೂರುಗೊಳಿಸಿ ಪೂರ್ಣಗೊಳಿಸಿದ್ದೇನೆ. ಬೀದರ್‌-ಯಶವಂತಪುರ ಲಾತೂರ್‌-ಯಶವಂತಪುರ ಬೀದರ್‌-ಮುಂಬೈ ಹೈದರಾಬಾದ್‌-ಬೀದರ್‌ ಬೀದರ್‌-ಮಚಲಿಪಟ್ಟಣ ರೈಲುಗಳು ವಿದ್ಯುತ್‌ ಮಾರ್ಗದಲ್ಲಿ ಸಂಚರಿಸುತ್ತಿವೆ. ಬೀದರ್‌-ಕಲಬುರಗಿ ರೈಲ್ವೆ ಮಾರ್ಗ 1998-99ರಲ್ಲಿ ಪ್ರಾರಂಭಗೊಂಡು 2013-14ರ ವರೆಗೆ ₹150 ಕೋಟಿ ಅನುದಾನದಲ್ಲಿ 37 ಕಿ.ಮೀ ಪೂರ್ಣಗೊಂಡಿತ್ತು. 2014ರಲ್ಲಿ ನಾನು ಸಂಸದನಾದ ನಂತರ ಮೂರು ವರ್ಷದಲ್ಲಿ ₹1392 ಕೋಟಿ ಅನುದಾನ ತಂದು 73.193 ಕಿ.ಮೀ ಕೆಲಸ ಪೂರ್ಣಗೊಳಿಸಿ 2017ರ ಅಕ್ಟೋಬರ್‌ 29ರಂದು ಪ್ರಧಾನಿಯವರಿಂದ ಉದ್ಘಾಟಿಸಲಾಗಿತ್ತು’ ಎಂದು ಹೇಳಿದರು. ‘2024ರ ಜೂನ್‌ನಲ್ಲಿ ಕೆಲಸ ಪೂರ್ಣ’-ಭಗವಂತ ಖೂಬಾ ಕೇಂದ್ರ ಸಚಿವಕಲಬುರಗಿ ಲಾತೂರ ವಾಯಾ ಆಳಂದ ಹೊಸ ರೈಲು ಮಾರ್ಗದ ಸರ್ವೇ ಸಹ ಪೂರ್ಣಗೊಂಡಿದ್ದು ಕಾಮಗಾರಿ ಮಂಜೂರಾತಿ ಹಂತದಲ್ಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು