News Karnataka Kannada
Saturday, April 27 2024
ಬೀದರ್

ಬೀದರ್: ಕೆಕೆಆರ್‌ಡಿಬಿಗೆ ಸಚಿವರನ್ನೇ ಅಧ್ಯಕ್ಷರಾಗಿ ನೇಮಿಸಲು ಒತ್ತಾಯ

Bidar: Demand for appointment of minister as chairman of KKRDB
Photo Credit : News Kannada

ಬೀದರ್: ‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371 (ಜೆ) ಕಲಂ ಶೈಕ್ಷಣಿಕ ಪ್ರವೇಶ, ನೇಮಕಾತಿ ಹಾಗೂ ಮುಂಬಡ್ತಿಗೆ ಸೀಮಿತವಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿ ಗುರಿಯೊಂದಿಗೆ ಅದಕ್ಕೆ ತಿದ್ದುಪಡಿ ತರಬೇಕು’ ಎಂದು ಕಲ್ಯಾಣ ಕರ್ನಾಟಕ ಪ್ರದೇಶದ ಹಿರಿಯ ಹೋರಾಟಗಾರ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ಮುಖಂಡ ಲಕ್ಷ್ಮಣ ದಸ್ತಿ ಆಗ್ರಹಿಸಿದರು.

ರಾಜ್ಯದಲ್ಲಿ ಬದಲಾವಣೆ ಆಗಿರುವುದನ್ನು ಸ್ವಾಗತಿಸುತ್ತೇನೆ. ಹೊಸ ಸಂಪುಟದಲ್ಲಿ ಜಿಲ್ಲೆಯ ಇಬ್ಬರು ಸಚಿವರಾಗಿದ್ದಾರೆ. ಇಬ್ಬರಿಂದ ರಚನಾತ್ಮಕ ಕೆಲಸಗಳಾಗುತ್ತವೆ ಎಂಬ ನಿರೀಕ್ಷೆ ಇದೆ. 371 (ಜೆ) ಕಲಂಗೆ ತಿದ್ದುಪಡಿ ತರಲು ಇಬ್ಬರು ಶ್ರಮಿಸಬೇಕು. ಇದರಿಂದ ಈ ಭಾಗದ ರೈತರು, ಕಾರ್ಮಿಕರಿಗೆ ಪ್ರಯೋಜನವಾಗುತ್ತದೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ತೀವ್ರ ಹಿನ್ನಡೆ ಉಂಟಾಗಿದೆ. ಶಾಸಕರು, ವಿಧಾನ ಪರಿಷತ್‌ ಸದಸ್ಯರನ್ನು ಕೆಕೆಆರ್‌ಡಿಬಿಗೆ ಅಧ್ಯಕ್ಷರಾಗಿ ನೇಮಿಸಿ, ಪುನರ್ವಸತಿ ಕಲ್ಪಿಸುವ ಕೆಲಸ ಮಾಡಿದ್ದರು. ಆದರೆ, ಅದು ಸರಿಯಾದ ಕ್ರಮವಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿದ ಸಚಿವರನ್ನೇ ಅದಕ್ಕೆ ಅಧ್ಯಕ್ಷರಾಗಿ ನೇಮಿಸಬೇಕು. ಈ ಭಾಗದಿಂದ ಈ ಸಲದ ಚುನಾವಣೆಯಲ್ಲಿ ಎಂಟು ಜನರು ಸಚಿವರಾಗಿದ್ದಾರೆ. ಇವರಲ್ಲಿ ಯಾರಾದರೂ ಒಬ್ಬರನ್ನು ನೇಮಕ ಮಾಡಬೇಕು ಎಂದು ಹೇಳಿದರು.

ಕಾರಂಜಾ ಸಂತ್ರಸ್ತರಿಗೆ ನ್ಯಾಯ ಒದಗಿಸಲಿ:

‘ಕಾರಂಜಾ ಸಂತ್ರಸ್ತರು ತಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 11 ತಿಂಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಹೊಸ ಸರ್ಕಾರ ‘ಗ್ಯಾರಂಟಿ’ ಕೊಡುವುದಾದರೆ ಈ ಸಮಸ್ಯೆ ಬಗೆಹರಿಸುವುದು ದೊಡ್ಡ ವಿಷಯವೇನಲ್ಲ. ಕೆಕೆಆರ್‌ಡಿಬಿ ಅನುದಾನದಡಿಯಲ್ಲೇ ಪರಿಹಾರ ಕೊಟ್ಟು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು’ ಎಂದು ದಸ್ತಿ ಆಗ್ರಹಿಸಿದರು.

– ಲಕ್ಷ್ಮಣ ದಸ್ತಿ, ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣ ಸಮಿತಿ ಮುಖಂಡಕಾರಂಜಾ ನೀರಾವರಿ ಯೋಜನೆಯಲ್ಲಿ 28 ಹಳ್ಳಿ ಜನ ಜಮೀನು ಕಳೆದುಕೊಂಡಿದ್ದಾರೆ. ಸರಿಸುಮಾರು ₹2 ಸಾವಿರ ಕೋಟಿ ಪರಿಹಾರ ನೀಡಬೇಕಿದೆ. ಕಾಲಮಿತಿಯಲ್ಲಿ ಪರಿಹಾರ ಕೊಡಬೇಕು. ಕಾರಂಜಾ ನೀರಾವರಿ ಯೋಜನೆಗೆ ಹೆಚ್ಚುವರಿಯಾಗಿ ಜಮೀನು ಸ್ವಾಧೀನಪಡಿಸಿಕೊಂಡ ನಂತರ ಪರಿಹಾರ ನೀಡಿಲ್ಲ. ಭೂಸ್ವಾಧೀನ ಇಲಾಖೆ ಮತ್ತು ನೀರಾವರಿ ನಿಗಮ ಕಚೇರಿಯ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಉಭಯ ಇಲಾಖೆಯ ಅಧಿಕಾರಿಗಳು ಸಂತ್ರಸ್ತರಿಂದ ಕಮಿಷನ್‌ ಪಡೆದು ರೈತರಿಗೆ ವಂಚಿಸುತ್ತಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಅವರ ವಿರುದ್ಧ ಕ್ರಮ ಜರುಗಿಸಬೇಕು.

2021-22ರಲ್ಲಿ ₹1 ಕೋಟಿಯಲ್ಲಿ ಕಾರಂಜಾ ನೀರಾವರಿ ಯೋಜನೆಗೆ ಜಮೀನು ನೀಡಿದ ಪ್ರದೇಶವನ್ನು ಡ್ರೋನ್‌ನಿಂದ ಸರ್ವೇ ಕಾರ್ಯ ನಡೆಸಲಾಗಿದೆ. ಆದರೆ, ಸರ್ವೇ ನಡೆಸಿ ವರದಿ ಸಿದ್ಧವಾಗಿದೆಯಾ? ಅದು ಎಲ್ಲಿದೆ? ಯಾವುದೇ ಮಾಹಿತಿಯಿಲ್ಲ. ತೆರಿಗೆದಾರರ ಹಣದಿಂದ ನಡೆದ ಕೆಲಸಕ್ಕೆ ಯಾವುದೇ ಉತ್ತರದಾಯಿತ್ವ ಇಲ್ಲವೇ? ಜಿಲ್ಲೆಯಿಂದ ಸಚಿವರಾಗಿರುವ ಈಶ್ವರ್‌ ಖಂಡ್ರೆ ಹಾಗೂ ರಹೀಮ್‌ ಖಾನ್‌ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಾವು ಕೂಡ ಶೀಘ್ರದಲ್ಲೇ ಸಚಿವರನ್ನು ಭೇಟಿಯಾಗಿ ನಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸುತ್ತೇವೆ. ಅವುಗಳು ಈಡೇರದಿದ್ದರೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಬೀದರ್‌, ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಕೃಷ್ಣಾ ಜಲ ಭಾಗ್ಯ ನಿಗಮದ ವ್ಯಾಪ್ತಿಗೆ ತಂದು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕೃಷ್ಣ, ಗೋದಾವರಿ ಕೊಳದ ಯೋಜನೆಗಳಿಗೆ ಹೈದರಾಬಾದ್‌ನಲ್ಲಿ ಒಂದೇ ಆಯುಕ್ತರ ಕಚೇರಿ ಇದೆ. ಅಲ್ಲಿ ನಮ್ಮ ಭಾಗದ ಯೋಜನೆಗಳಿಗೆ ಆದ್ಯತೆ ಸಿಗುತ್ತಿಲ್ಲ. ಇದನ್ನು ಹೊಸ ಸಚಿವರು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕ್ ನಳ್ಳಿ, ಮುಖಂಡರಾದ ಮಹೇಶ, ಕೇದಾರನಾಥ, ರಾಚಪ್ಪ ಸ್ವಾಮಿ, ವಿನಯ್‌ ಮಾಳಗಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು