ಹಾವೇರಿ : ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ಘಟನೆ ಹಾವೇರಿಯ ಕಬ್ಬೂರು ಗ್ರಾಮದಲ್ಲಿ ನಡೆದಿದೆ. ನಿಂಗಪ್ಪ ಚನ್ನಬಸಪ್ಪ ಕರಿಗಾರ್ (40) ಕೊಲೆಯಾದ ದುರ್ದೈವಿ. ಶಿವು ನಿಂಗಪ್ಪ ಪಟ್ಟೇದವರಿಂದ ಎಂಬ ವ್ಯಕ್ತಿ ಭೀಕರ ಹತ್ಯೆಗೈದ ಆರೋಪಿ.
ಮೃತ ನಿಂಗಪ್ಪ ಮತ್ತು ಆರೋಪಿ ಶಿವು ಮನೆಗಳು ಅಕ್ಕಪಕ್ಕದಲ್ಲಿತ್ತು. ಇಬ್ಬರಿಗೂ ಎಣ್ಣೆ ಚಟ ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಬರೋಬ್ಬರಿ ಒಂದು ತಿಂಗಳ ಮೊದಲೇ ಇಬ್ಬರ ನಡುವೆ ಜಗಳ ಆಗಿತ್ತು. ಮೊದಲೇ ಒಂದು ಬಾರಿ ತಲೆಗೆ ಆರೋಪಿ ಶಿವು ಒಡೆದಿದ್ದರು.
ಗ್ರಾಮದ ಹಿರಿಯರು ಸೇರಿ ಇಬ್ಬರು ನಡುವೆ ರಾಜಿ ಮಾಡಿಸಿದ್ದರೂ ಸಹ ಶಾಂತಿ ಉಳಿಯಲಿಲ್ಲ. ಇಂದು ಬೆಳಿಗ್ಗೆ ಮತ್ತೆ ಕಲ್ಲಿನಿಂದ ಏಕಾಏಕಿ ಶಿವು ಹಲ್ಲೆ ಮಾಡಿದ್ದಾರೆ. ತಲೆಗೆ ಬಲವಾಗಿ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ನಿಂಗಪ್ಪ ಸಾವನ್ನಪ್ಪಿದ್ದಾರೆ. ನಾನೇ ಕೊಲೆ ಮಾಡಿದ್ದೇನೆ” ಎಂದು ಪೊಲೀಸರ ಮುಂದೆ ಆರೋಪಿ ಶಿವು ಶರಣಾಗಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

