ಚಾಮರಾಜನಗರ: ಟೆಂಪೋವೊಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ, 11 ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ನಡೆದಿದೆ.

ಹರಳೆ ಗ್ರಾಮದ ನಿವಾಸಿ ಯಶವಂತ್ (11) ಮೃತಪಟ್ಟ ಬಾಲಕ. ಇಂದು ಮಧ್ಯಾಹ್ನ ಯಶವಂತ್ ಎಂದಿನಂತೆ ತನ್ನ ಸೈಕಲ್‌ನಲ್ಲಿ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಅತಿ ವೇಗವಾಗಿ ಬಂದ ಟೆಂಪೋ ನಿಯಂತ್ರಣ ತಪ್ಪಿ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕ ಸೈಕಲ್ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದಾನೆ. ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಅತಿಯಾದ ರಕ್ತಸ್ರಾವದಿಂದಾಗಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಹರಳೆ ಗ್ರಾಮದ ರಸ್ತೆಯಲ್ಲಿ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿರುವುದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಳ್ಳೇಗಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.