News Karnataka Kannada
Friday, May 10 2024
ತುಮಕೂರು

ಕಲ್ಪತರು ನಾಡಲ್ಲಿ ಡ್ಯ್ರಾಗನ್ ಫ್ರೂಟ್ ಬೆಳೆದು ಯಶಸ್ಸು ಕಂಡ ದಂಪತಿ

Kalpataru is a successful couple who grew dragon fruit in the land
Photo Credit : News Kannada

ತುಮಕೂರು: ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಗ್ರಾಮದ ಪದವೀಧರರಾದ ಗೀತಾ ಮತ್ತು ಅಂಜನ್ಕುಮಾರ್ ದಂಪತಿ ಡ್ರ್ಯಾಗನ್ ಫ್ರೂಟ್ ಎಂಬ ಬೆಳೆಗೆ ಕೈಹಾಕುವುದರ ಮೂಲಕ ಸುತ್ತಮುತ್ತಲಿನ ರೈತರ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್ಗೆ ಬಹು ಬೇಡಿಕೆ ಇರುವ ಹಿನ್ನೆಲೆಯಲ್ಲಿ ದಂಪತಿಗಳು ಈ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ.

ಈ ದಂಪತಿ ಪದವಿ ವಿದ್ಯಾಭ್ಯಾಸವನ್ನು ಮಾಡಿದ್ದು ಜೀವನಾಧಾರಕ್ಕೆ ತುಮಕೂರಿನಲ್ಲಿ ಸೂಪರ್ ಮಾರ್ಕೆಟ್ ವ್ಯವಹಾರ ಮಾಡಿಕೊಂಡಿದ್ದರು. ದೇಶದಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಸೂಪರ್ ಮಾರ್ಕೆಟ್ ಅನ್ನು ಮುಚ್ಚಿ ಹುಟ್ಟೂರಿನ ಕಡೆ ಬಂದು ವ್ಯವಸಾಯಕ್ಕೆ ತೊಡಗಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಜೋಳ, ತೊಗರಿ, ಶೇಂಗಾ, ಸಜ್ಜೆಯನ್ನು ಬೆಳೆಯುತ್ತಿದ್ದರು. ಆದರೇ ಈ ದಂಪತಿಗಳು ತೋಟಗಾರಿಕೆ ಬೆಳೆಯಾದ ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಪ್ರಾರಂಭಿಸಿದಾಗ ಅಕ್ಕ-ಪಕ್ಕದ ಗ್ರಾಮಸ್ಥರು ಇದರ ಬದಲು ಅಡಿಕೆ ಅಥವಾ ತೆಂಗಿನ ಸಸಿಗಳನ್ನು ನಾಟಿ ಮಾಡಿದರೆ ಮುಂದೊಂದು ದಿನ ಲಾಭ ಬರುತ್ತದೆ. ಈ ಸಸಿ ಕತ್ತಾಳೆ ರೀತಿಯಲ್ಲಿ ಇದೆ. ಇದು ಯಾವ ಬೆಳೆ ಕೊಡುತ್ತದೆ ಎಂದು ಟೀಕೆ ಮಾಡುತ್ತಿದ್ದರು. ಆದರೇ ಅವರ ಟೀಕೆಗಳಿಗೆ ಕಿವಿಕೊಡದೆ ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ಬೆಳೆಯುವುದರ ಮೂಲಕ ಯಶಸ್ಸನ್ನು ಕಂಡಿದ್ದಾರೆ.

ಫಲಾನುಭವಿ ಗೀತಾರವರು ಆದಿಶಕ್ತಿ ಸಂಜೀವಿನಿ ಒಕ್ಕೂಟದಲ್ಲಿ ಸದಸ್ಯರಾಗಿದ್ದು, ಸ್ವ-ಸಹಾಯ ಸಂಘದಲ್ಲಿ ಸಾಲ ಸೌಲಭ್ಯವನ್ನು ಪಡೆದು ನಂತರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಆರ್ಥಿಕ ನೆರವು ಸಹ ದೊರೆಯುತ್ತದೆಂದು ತಿಳಿದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಹಾಯಕರ ಸಹಕಾರದೊಂದಿಗೆ ಜಿಕೆವಿಕೆ ಹಿರೇಹಳ್ಳಿ ನರ್ಸರಿ ಕೇಂದ್ರದಿಂದ 1 ಸಸಿಗೆ 4೦ ರೂ ನೀಡಿ ಒಟ್ಟು 1500 ಡ್ಯ್ರಾಗನ್ ಫ್ರೂಟ್ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ.

ತಮ್ಮ ಬೋರ್ವೆಲ್ನಲ್ಲಿ ಬರುವ ನೀರನ್ನೇ ಬಳಸಿಕೊಂಡು ಕಡಿಮೆ ತೇವಾಂಶದಲ್ಲೂ ಈ ಬೆಳೆಯನ್ನು ಬೆಳೆದು ಸಾಬೀತು ಪಡಿಸಿದ್ದಾರೆ. ಒಣ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದರೂ ಡ್ಯ್ರಾಗನ್ ಫ್ರೂಟ್ ಬೆಳೆದು ಹೆಚ್ಚು ಆದಾಯ ಪಡೆಯಬಹುದಾಗಿದೆ. ಕಡಿಮೆ ತೇವಾಂಶವಿರುವ ಒಣ ಭೂಮಿ ಈ ಬೆಳೆಗೆ ಸೂಕ್ತವಾಗಿದೆ. ಇದು ಉಷ್ಣವಲಯದ ಹಣ್ಣಾಗಿದ್ದು ಗುಲಾಬಿ ಬಣ್ಣದಿಂದ ಕೂಡಿದೆ.

ಸಂಪೂರ್ಣವಾಗಿ ತೋಟಕ್ಕೆ ಸಾವಯವಗೊಬ್ಬರವನ್ನು ಬಳಸುವುದರ ಮೂಲಕ ಸಾವಯವ ಕೃಷಿಯನ್ನು ಮಾಡಿದ್ದಾರೆ. ಮೊದಲ ಹಂತದಲ್ಲಿ ಬೆಳೆದಿರುವ ಡ್ಯ್ರಾಗನ್ ಫ್ರೂಟ್ ಹಣ್ಣುಗಳನ್ನು ಮಾರಾಟ ಮಾಡಿ, ಮೊದಲ ವರ್ಷದ ಬೆಳಯಲ್ಲೇ ಒಂದು ಲಕ್ಷರೂ ನಿವ್ವಳ ಆದಾಯ ಪಡೆದಿದ್ದಾರೆ.

ಬೆಳೆ ವಿಧಾನ : ಡ್ರ್ಯಾಗನ್ ಫ್ರೂಟ್ ಬೆಳೆಯಲು ಜಮೀನು ಮೊದಲು ಹದ ಮಾಡಬೇಕು. ನಂತರ ಬದುಗಳಾಗಿ ನಿರ್ಮಿಸಿ, ಆ ಬದುಗಳ ಮೇಲೆ ಕಲ್ಲುಕಂಬ ಅಳವಡಿಸಬೇಕು. ಒಂದು ಕಲ್ಲುಕಂಬದ ಮೇಲೆ ಸಿಮೆಂಟ್ನಿಂದ ನಿರ್ಮಾಣ ಮಾಡಿದ ಗಾಲಿಯನ್ನು ಅಳವಡಿಸಬೇಕು. ೧ ಕಂಬದಿಂದ ಮತ್ತೊಂದು ಕಂಬಕ್ಕೆ ೧೨ ಅಡಿ ಉದ್ದ ಹಾಗೂ ೮ ಅಡಿ ಅಗಲ ಅಂತರವಿದ್ದಾಗ ಮಾತ್ರ ಸಸಿಗಳು ಸಮೃದಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಸಸಿ ನಾಟಿ ಮಾಡುವ ವಿಧಾನ : ಒಂದು ಕಂಬಕ್ಕೆ ೪ ರಿಂದ ೫ ಹಣ್ಣಿನ ಸಸಿಗಳಂತೆ ಒಟ್ಟು ೧೪೦೦ ಗುಲಾಬಿ (ಪಿಂಕ್) ಬಣ್ಣದ ಉತ್ತಮ ತುಂಡುಗಳನ್ನು ತಂದು ನಾಟಿ ಮಾಡಲಾಗಿದೆ. ಇವುಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತಿದೆ. ಒಂದು ಎಕರೆಗೆ ೩ ರಿಂದ ೪ ಲಕ್ಷ ಖರ್ಚು ಮಾಡಿದ್ದು, ನಿಧಾನವಾಗಿ ಫಲ ಬರಲಿದೆ ಎಂಬುದು ರೈತನ ಅಭಿಪ್ರಾಯ.

ಈ ಹಣ್ಣಿಗೆ ಬೇಡಿಕೆ ಹೆಚ್ಚು: ಈಗ ಮಾರುಕಟ್ಟೆಯಲ್ಲಿ ೧ ಕೆಜಿ ಡ್ರ್ಯಾಗನ್ ಪ್ರೂಟ್ಸ್ಗೆ ೧೮೦ ರಿಂದ ೨೫೦ ವರೆಗೆ ಬೆಲೆ ಇದೆ. ಬೆಂಗಳೂರು, ತುಮಕೂರು ಸುತ್ತ ಮುತ್ತಲಿನ ಜನರು ಕೊಂಡು ಕೊಳ್ಳಲು ಮುಂದೆ ಬರುತ್ತಿದ್ದಾರೆ.
ಹಣ್ಣು ಸೇವನೆಯಿಂದಾಗುವ ಪ್ರಯೋಜನಗಳು: ಡ್ರ್ಯಾಗನ್ ಫ್ರೂಟ್ಸ್ ತಿನ್ನಲು ರುಚಿಕರವಾಗಿರುತ್ತದೆ ಹಾಗೂ ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ಬಹುಬೇಡಿಕೆ ಈ ಹಣ್ಣಿಗಿದೆ. ಇದು ಹೆಚ್ಚು ನೀರಿನಾಂಶ, ಪ್ರೋಟೀನ್ ಹಾಗೂ ಕೊಬ್ಬಿನ ಆಮ್ಲಗಳಿಂದ ಕೂಡಿದೆ. ಸಕ್ಕರೆ ಕಾಯಿಲೆ, ಬಿ.ಪಿ, ಹೃದಯಸಂಬಂಧಿ, ಗ್ಯಾಸ್ಟಿಕ್, ಕೊಲೆಸ್ಟ್ರಾಲ್ ಕಡಿಮೆಗೊಳಿಸುವಲ್ಲಿ, ಬಿಳಿರಕ್ತಕಣಗಳನ್ನು ಹೆಚ್ಚಿಸುವಲ್ಲಿ ಮತ್ತು ಡೆಂಗಿ ಜ್ವರಕ್ಕೆ, ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳಿಗೆ ಈ ಹಣ್ಣು ರಾಮಬಾಣವಾಗಿದೆ.

ಗ್ರಾಮೀಣ ಭಾಗದ ಜನರು ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಉತ್ಸಾಹಿಗಳಾಗಿದ್ದು, ಬಂಡವಾಳದ ಕೊರತೆಯನ್ನು ಎದುರಿಸುತ್ತಿರುವ ರೈತರಿಗೆ ನರೇಗಾ ಯೋಜನೆಯ ಸಹಾಯಧನ ಬಹಳ ಉಪಕಾರಿಯಾಗುತ್ತದೆ. ಈ ಯೋಜನೆಯ ಅನುಕೂಲತೆಯನ್ನು ಗ್ರಾಮೀಣ ಬಾಗದ ರೈತರು ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಬೇಕು ಎನ್ನುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು