News Karnataka Kannada
Friday, May 03 2024
ತುಮಕೂರು

ಎಚ್.ಡಿ. ದೇವೇಗೌಡ ಜನರ ನಡುವಿನ ನಾಯಕ – ಬಿ.ಎನ್.ಚಂದ್ರಶೇಖರಯ್ಯ

Thumkur
Photo Credit : News Kannada

ತುಮಕೂರು: ೧೯೬೦ರ ದಶಕದಿಂದಲೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿರುವ ರೈತರ ಮಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಸ್ತುತತೆಯ ಜನನೇತಾರರಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಬಿ.ಎನ್.ಚಂದ್ರಶೇಖರಯ್ಯ ತಿಳಿಸಿದರು.

ಅವರು ಪಾರದರ್ಶಕ ಮಾಧ್ಯಮ ಸಂಸ್ಥೆ ಹಾಗೂ ಜಿಲ್ಲಾ ಕಸಾಪ ಆಶ್ರಯದಲ್ಲಿ ತುಮಕೂರಿನ ಕನ್ನಡ ಭವನದಲ್ಲಿ ಏರ್ಪಡಿಸಿದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬದುಕು -ಬರಹ ಕುರಿತ ’ನೇಗಿಲಗೆರೆಗಳು’ ಪುಸ್ತಕವನ್ನು ಜಿಲ್ಲಾಮಟ್ಟದಲ್ಲಿ ಸಾಂಕೇತಿಕ ಬಿಡುಗಡೆಗೊಳಿಸಿ ಮಾತನಾಡಿದರು.

ದೇವೇಗೌಡರು ಶಾಸಕರಾಗಿ, ಸಚಿವರಾಗಿ, ವಿಪಕ್ಷ ನಾಯಕರಾಗಿ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿಯವರೆಗಿನ ಉನ್ನತಸ್ಥಾನಕ್ಕೇರಿದ್ದರೂ ತಮ್ಮ ೬ ದಶಕ ಮೀರಿದ ರಾಜಕೀಯದಲ್ಲಿ ಅಧಿಕಾರ ಸ್ಥಾನದಲ್ಲಿದ್ದುದು ಕೇವಲ ಹತ್ತು ವರ್ಷಗಳು ಮಾತ್ರ. ಈ ಹತ್ತುವರ್ಷದಲ್ಲಿ ಪ್ರತೀ ದಿನ, ಪ್ರತಿಕ್ಷಣವನ್ನು ವ್ಯರ್ಥ ಮಾಡದೆ ರೈತಪರ, ನೀರಾವರಿ ಯೋಜನೆಗಳ ಜಾರಿಗೆ ಹೆಚ್ಚಿನ ಒತ್ತುಕೊಟ್ಟಿದ್ದು, ಪ್ರಧಾನಿಯಾಗಿದ್ದಲೂ ವೈಯಕ್ತಿಕ ಭದ್ರತೆಗೆ ಒತ್ತುಕೊಡದೆ ಸೌತ್ ಬ್ಲಾಕ್ ಕಚೇರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಬುಲೆಟ್ ಫ್ರೂಪ್ ಭದ್ರತೆಯಿಲ್ಲದೆ ಕಾಶ್ಮೀರಕ್ಕೆ ಭೇಟಿ ಕೊಟ್ಟು ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಮರುಸ್ಥಾಪಿಸಿದ್ದನ್ನು ಅಲ್ಲಿನ ಜನ ಎಂದಿಗೂ ಮರೆಯುವುದಿಲ್ಲ. ಕೃಷ್ಣ, ಕಾವೇರಿ ಯೋಜನೆಗಳ ಜಾರಿ ವಿಚಾರದಲ್ಲಿ ಅವರ ಹೋರಾಟ, ಸಡಿಲಸದ ಪಟ್ಟುಗಳು ಅವಿಸ್ಮರಣೀಯ. ಆದರೆ ಗೌಡರ ಸಾರ್ವಜನಿಕ ಕಾರ್ಯಗಳ ಸ್ಮರಣೆಗಿಂತ ಟೀಕೆಗಳನ್ನು ಹೆಚ್ಚಾಗಿ ಎದುರಿಸಿದ್ದು ದುರಂತ ಎಂದರು.

ಇಂದಿರಾಗಾಂಧಿ ಅವರು ಅರಸು ಬಳಿಕ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಲು ಬಯಸಿದ್ದ ಅನೇಕ ಗೌಪ್ಯ ರಾಜಕೀಯ ಸಂಗತಿಗಳು ಸೇರಿದಂತೆ ಗೌಡರ ಹೋರಾಟ, ಜೀವನ, ಅನುಭವಿಸದ ನೋವುಗಳು, ಜನಪರ ಯೋಜನೆಗಳನ್ನು ಸಾಕಾರಗೊಳಿಸುತ್ತಿದ್ದ ಅವರ ಆಡಳಿತ ಚಾಕಚಕ್ಯತೆ ಅಪರೂಪದ ಸಂಗತಿಗಳನ್ನು ಸುಗತ ಶ್ರೀನಿವಾಸರಾಜು ಅವರು ಇಂಗ್ಲೀಷ್ ಆವೃತ್ತಿಯಲ್ಲಿ ಹಾಗೂ ರೋಸಿಡಿಸೋಜ ಅವರು ಕನ್ನಡದಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲದೆ ವಾಸ್ತವತೆಯಿಂದ ತೆರೆದಿಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ಪ್ರತಿಯೊಬ್ಬರು ಈ ಕೃತಿಯನ್ನು ಓದಲೆಬೇಕು. ಕೃತಿ ದೇವೇಗೌಡರ ಮೂಲಕ ಇಡೀ ರಾಜ್ಯ, ರಾಷ್ಟ್ರ ರಾಜಕಾರಣದ ಸಂದಿಗ್ದತೆ, ಸವಾಲನ್ನು ನಮ್ಮ ಮುಂದಿಡುತ್ತದೆ ಎಂದರು.

ಮೂಲ ಕೃತಿಕಾರರಾದ ಸುಗತ ಶ್ರೀನಿವಾಸರಾಜು ಸಂವಾದದಲ್ಲಿ ಪಾಲ್ಗೊಂಡು ನಾನು ಈ ಕೃತಿ ಬರೆಯಲು ಕೈಗೆತ್ತುಕೊಂಡಾಗ ದೇವೇಗೌಡರ ಬಗ್ಗೆ ಇದ್ದ ಭಾವನೆಗಳೇ ಬದಲಾದವು. ಗೌಡರ ರಾಜಕೀಯದಹೊರತಾಗಿ ಅವರೊಳಗಿರುವ ಅದ್ಭುತ ಜ್ಞಾನ, ಸ್ಮರಣಾ ಶಕ್ತಿ, ಓದಿನ ಆಸಕ್ತಿ, ಶಾಸನಸಭೆ , ಪಾರ್ಲಿಮೆಂಟ್‌ನ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದ ಪರಿ, ರೈತರ ಪರವಾಗಿ, ನೀರಾವರಿ ಯೋಜನೆ ಜಾರಿ ವಿಷಯವಾಗಿ ಅಧಿಕಾರ ತ್ಯಾಗ ಮಾಡುತ್ತಿದ್ದ ಅವರ ಬದ್ದತೆ ಎಲ್ಲವು ತಿಳಿಯಿತು. ಅವರಲ್ಲಿ ಅಧಿಕಾರದ ಹಪಹಪಿಯಿರಲಿಲ್ಲ. ವಿರೋಧ ಪಕ್ಷದಲ್ಲಿ ಹೆಚ್ಚು ಇರಲು ಬಯಸುತ್ತಿದ್ದರು. ಇವೆಲ್ಲ ಅಂಶವನ್ನು ದಾಖಲೆ ಸಹಿತ ಇಂಗ್ಲೀಷ್ ಹಾಗೂ ಕನ್ನಡ ಅನುವಾದಿತ ಕೃತಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿ ತುಮಕೂರಿನಲ್ಲಿ ಪುಸ್ತಕ ಚರ್ಚೆಗೆ ದ ಕಸಾಪ, ಸಮಾನ ಮನಸ್ಕರು ಹಾಗೂ ಪ್ರಜಾಪ್ರಗತಿ ಸಹ ಸಂಪಾದಕ ಟಿ.ಎನ್.ಮಧುಕರ್ ಅವರು ಸಹಕರಿಸಿದ್ದನ್ನು ಸ್ಮರಿಸಿದರು.

ಕೃತಿಯ ಕನ್ನಡ ಅನುವಾದಕಿ ರೋಸಿ ಡಿಸೋಜ ಕೃತಿಯನ್ನು ಪರಿಚಯಿಸುವಾಗ ಭಾವುಕರಾದರು. ಪತ್ರಕರ್ತ ಉಗಮ ಶ್ರೀನಿವಾಸ್ ಅವರು ೧೯೯೬ರ ಲೋಕಸಭೆ ಚುನಾವಣೆಯಲ್ಲಿ ೧೫ ಎಂಪಿ ಸ್ಥಾನ ಜನತಾದಳಕ್ಕೆ ಕೊಡಿ ಪಿ.ವಿ.ನರಸಿಂಹರಾವ್ ಅವರನ್ನೇ ಅಲುಗಾಡಿಸುವೇ ಎಂದು ಹೇಳಿ ನಂತರ ಪ್ರಧಾನಿಯಾದ ಚರಿತ್ರಾರ್ಹ ಘಟನೆಯನ್ನು ಸ್ಮರಿಸಿದರು. ಪಾರದರ್ಶಕ ಮಾಧ್ಯಮ ಸಂಸ್ಥೆಯ ನಿರ್ದೇಶಕ ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಎಂ.ಎಚ್.ನಾಗರಾಜ್, ಕೆ.ಚಂದ್ರಣ್ಣ, ರಂಗಮಣಿ ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಧ್ಯಕ್ಷ ಟಿ.ಆರ್.ನಾಗರಾಜು, ವಿಜಯ್‌ಗೌಡ, ಮಧು, ಶ್ರೀನಿವಾಸ್ ಸೇರಿದಂತೆ ಪಕ್ಷದ ಮುಖಂಡರು, ಸಾಹಿತಿಗಳು, ಚಿಂತಕರು ಸಭಿಕರಾಗಿ ಪಾಲ್ಗೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು