ಬೆಂಗಳೂರು: ಇಂದು (ಜುಲೈ 18) ಸಂಜೆಯವರೆಗೂ ನಡೆಯಲಿರುವ ಕಾಂಗ್ರೆಸ್ ನ ಮಹಾಘಟಬಂಧನ್ ಬೈಠಕ್ನಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ತಂತ್ರೋಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಇದರ ಜೊತೆ, ತಮ್ಮ ಪಕ್ಷಕ್ಕೆ ಪ್ರಧಾನಿ ಹುದ್ದೆ ಬಗ್ಗೆ ಆಸಕ್ತಿಯಿಲ್ಲ. ಆದರೆ ಭಾರತ, ಸಂವಿಧಾನ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಕಲ್ಪನೆಯನ್ನು ರಕ್ಷಿಸುವಲ್ಲಿ ಆಸಕ್ತಿ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ದ ಚುನಾವಣಾ ರಣತಂತ್ರಕ್ಕಾಗಿ ಸಾಮಾನ್ಯ ವೇದಿಕೆಯನ್ನು ರೂಪಿಸುವ ಪ್ರಯತ್ನದ ಭಾಗವಾಗಿ ವಿರೋಧ ಪಕ್ಷಗಳ ಎರಡನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ರಾಜ್ಯ ಮಟ್ಟದಲ್ಲಿ ವಿವಿಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಆದರೆ ಜನರನ್ನು ರಕ್ಷಿಸುವ ಸಲುವಾಗಿ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಎಂದು ಹೇಳಿದ್ದಾರೆ.
ನಮ್ಮ ಉದ್ದೇಶ ನಮಗಾಗಿ ಅಧಿಕಾರ ವಹಿಸಿಕೊಳ್ಳುವುದಲ್ಲ. ಇದು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು. ರಾಜ್ಯ ಮಟ್ಟದಲ್ಲಿ ನಮ್ಮ ನಡುವೆ ಕೆಲವು ಭಿನ್ನಾಭಿಪ್ರಾಯಗಳಿವೆ. ಆದರೆ ಈ ಭಿನ್ನತೆ ಅಷ್ಟು ದೊಡ್ಡದಲ್ಲ. ನಿರುದ್ಯೋಗದಿಂದ ಬಳಲುತ್ತಿರುವ ಯುವಕರು ಮತ್ತು ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲು ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಬಹುದು ಎಂದು ಖರ್ಗೆ ಹೇಳಿದ್ದಾರೆ.