ಬಂಗಾರಪೇಟೆ: ಕುಲುಷಿತ ನೀರು ಕುಡಿದು ಮೂವರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ದೊಡ್ಡಪೊನ್ನಾಂಡಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಿರಿಶ್, ಧನು ಮತ್ತು ಡಂಕಣಾಚಾರಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಸೋಮವಾರ ಬೆಳಗ್ಗೆ ತಿಂಡಿ ತಿಂದ ಬಳಿಕ ಎಂದಿನಂತೆ ನೀರು ಕುಡಿದಾಗ ಈ ಘಟನೆ ನಡೆದಿದೆ.
ಸೋಮವಾರ ವಸತಿ ಶಾಲೆಯಲ್ಲಿರುವ ಸುಮಾರು 250ಕ್ಕೂ ಹೆಚ್ಚಿನ ಮಕ್ಕಳು ಬೆಳಗ್ಗಿನ ತಿಂಡಿ ಮುಗಿದ ಬಳಿಕ ಅಲ್ಲಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಮಕ್ಕಳು ನೀರು ಕುಡಿದರು. ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಆದರೆ ಶುದ್ಧ ನೀರಿನ ಒಂದು ಘಟಕದಲ್ಲಿ ನೀರು ಕುಡಿದ ಮೂವರು ಮಕ್ಕಳು ಮಾತ್ರ ವಾಂತಿ, ಭೇದಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ವಸತಿ ಶಾಲೆಯ ಶಿಕ್ಷಕರು ತಕ್ಷಣವೇ ಮೂವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂವರು ವಿದ್ಯಾರ್ಥಿಗಳಿಗೆ ಯಾವುದೇ ಅಪಾಯವಿಲ್ಲದೆ ಚೇತರಿಸಿಕೊಂಡಿದ್ದಾರೆ. ಕಾಮಸಮುದ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.