ಚಿಕ್ಕಮಗಳೂರು: ಕೇವಲ ಎರಡು ವರ್ಷಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅಧಿಕಾರಿಗಳ ನಿರ್ಲಕ್ಷ್ಯದಿಂದ 48 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬಾಗಿಲು ಹಾಕಲಾಗಿದೆ. ಕಳೆದ ವರ್ಷ ಅಂದ್ರೆ 2022-2023ರ ಸಾಲಿನಲ್ಲಿ 21 ಶಾಲೆಗಳನ್ನ ಮುಚ್ಚಲಾಗಿತ್ತು. ಈ ವರ್ಷ 27 ಶಾಲೆಗಳಿಗೆ ಸರ್ಕಾರ ಬೀಗ ಹಾಕಿಸಿದೆ.
ಇನ್ನು ಈ ಕುರಿತು ಡಿಡಿಪಿಐ ರಂಗನಾಥ ಸ್ವಾಮಿ ಅವರು ಮಾತನಾಡಿ ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸಲು ಪೋಷಕರು ಹಿಂದೇಟು ಹಾಕಿದ್ದು, ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗಿದೆ. ಸರ್ಕಾರಿ ಶಾಲೆಯನ್ನ ಶಿಕ್ಷಣ, ಊಟ, ಆಟದ ಮೈದಾನ ಎಲ್ಲವೂ ಸರಿಯಾಗಿದೆ ಆದರೂ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಯನ್ನ ಮುಚ್ಚಲಾಗುತ್ತಿದೆ ಎಂದರು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ವರ್ಷದಿಂದ ವರ್ಷಕ್ಕೆ ಸರ್ಕಾರ ಸರ್ಕಾರಿ ಶಾಲೆಗಳ ಬಾಗಿಲು ಹಾಕಿಸುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರ ಮೂಲಭೂತ ಸೌಕರ್ಯಗಳನ್ನ ಸರ್ಕಾರಿ ಶಾಲೆಗೆ ಕಲ್ಪಿಸದ ಹಿನ್ನೆಲೆ ಪೋಷಕರು ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದು, ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ 30 ಕ್ಕೂ ಅಧಿಕ ಶಾಲೆಗಳು ಬಿಳುವ ಸ್ಥಿತಿಯಲ್ಲಿದ್ದು, ಮಕ್ಕಳು ಅದರಲ್ಲಿಯೇ ಪಾಠ ಕೇಳುತ್ತಿದ್ದಾರೆ. ಶಾಲೆಗಳಲ್ಲಿ ಉತ್ತಮ ಕಟ್ಟಡ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.