ಬೆಂಗಳೂರು: ಸಿಲಿಕಾನ್ ಸಿಟಿಯ ಚಾಮರಾಜಪೇಟೆಯ ಟಿಆರ್ ಮೀಲ್ ಬಳಿ ಟೈಯರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದ್ದು, ಬೆಂಕಿಯ ಕೆನ್ನಾಲಿ ಗಗನದೆತ್ತರಕ್ಕೆ ಉರಿದಿದೆ.
ಮುಂಜಾನೆ 4:30 ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. 5:30 ಸಮಯಕ್ಕೆ ಪೊಲೀಸರು ಮನೆಯಿಂದ ಎಲ್ಲರೂ ಹೊರಗಡೆ ಬರುವಂತೆ ಅನೌನ್ಸ್ ಮಾಡಿದರು. ಅನೌನ್ಸ್ ಮಾಡಿ ಪೊಲೀಸರು ಕರೆಯೋತನಕ ನಮಗೆ ತಿಳಿದಿರಲಿಲ್ಲ. ಅಕ್ಕಪಕ್ಕದ ಸುಮಾರು 20ಕ್ಕೂ ಹೆಚ್ಚು ಮನೆಗಳು ಖಾಲಿ ಮಾಡಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡವು.
3 ಗಂಟೆಯಿಂದ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಕಂಟ್ರೋಲ್ ರೂಂನಲ್ಲಿ ಪಬ್ಲಿಕ್ ಕಾಲ್ ಪಿಕ್ ಮಾಡಿಲ್ಲ. ನಾಲ್ಕೂವರೆ ಸುಮಾರಿಗೆ ಬಂದು ಬೆಂಕಿ ನಂದಿಸೋ ಕೆಲಸ ಮಾಡಲಾಗುತ್ತಿದೆ. ಒಂದೂವರೆ ಗಂಟೆ ತಡವಾಗಿ ಅಗ್ನಿಶಾಮಕ ವಾಹನಗಳು ಬಂದ ಕಾರಣ ಗೋಡೌನ್ ಸಂಪೂರ್ಣವಾಗಿ ಬೆಂಕಿ ಅವರಿಸಿಕೊಂಡಿದೆ ಎಂದು ಸ್ಥಳೀಯರು ಹೇಳಿದರು.
ಬೆಂಕಿ ತಗಲಿರೋ ಕಟ್ಟಡದಲ್ಲಿ ಸುಮಾರು 8 ಟಯರ್ ಅಂಗಡಿಗಳು ಇದ್ದು, ಅಷ್ಟು ಕೂಡ ಹೊತ್ತಿ ಉರಿಯುತ್ತಿವೆ. ನಾವೆಲ್ಲಾ ಆತಂಕದಿಂದ ಮನೆಯಲ್ಲಿ ಕರೆಂಟ್, ಗ್ಯಾಸ್ ಗಳನ್ನೆಲ್ಲವೂ ಆಪ್ ಮಾಡಿ ಹೊರಗಡೆ ಬಂದು ನೋಡಿದಾಗ ಬೆಂಕಿಯ ಕೆನ್ನಾಲಿಗೆ ನೋಡಿ ಆತಂಕವಾಯ್ತು ಎಂದು ಸ್ಥಳೀಯರು ಹೇಳಿದ್ದಾರೆ.