ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇಂದು ಚಾಲನೆ ದೊರಕಿದ್ದು, ಮೊದಲ ಬಸ್ ಮಂಜುನಾಥನ ಸನ್ನಿಧಿ ಧರ್ಮಸ್ಥಳಕ್ಕೆ ತೆರಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಹೊರಡುವ ಬಸ್ಸಿಗೆ ಮೆಜೆಸ್ಟಿಕ್ ಕೆಎಸ್ಆರ್ ಟಿಸಿಯಲ್ಲಿ ಚಾಲನೆ ನೀಡುವ ಮೂಲಕ ‘ಶಕ್ತಿ’ ಯೋಜನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಿದರು. ಎರಡನೇ ಬಸ್ ಮೈಸೂರು ಕಡೆಗೆ ತೆರಳಿದ್ದು, ಮೂರನೇ ಬಸ್ ಕಲಬುರುಗಿ ಹಾಗೂ ನಾಲ್ಕನೇ ಬಸ್ ಬೆಳಗಾವಿ ಕಡೆಗೆ ಹೊರಟಿದೆ.
ಇಂದು ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಕ್ಕಿದೆ. 18,609 ಬಸ್ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ.
ಇನ್ನು ಈ ಶಕ್ತಿ ಯೋಜನೆಯ ಕುರಿತು ಮಾತನಾಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು, ಮತ್ತೆ ಚುನಾವಣೆ ಆಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಮೇಲೂ ಉಚಿತ ಕೊಡ್ತೀವಿ. 10 ವರ್ಷವೂ ಉಚಿತ ಕೊಡ್ತೀವಿ ಎಂದು ಭರವಸೆ ನೀಡಿದರು. ಬಸ್ ಸ್ಟಾಪ್ ಇರೋ ಕಡೆ ಬಸ್ ಕಡ್ಡಾಯವಾಗಿ ನಿಲ್ಲಿಸಬೇಕು. ನಮ್ಮ ಇಲಾಖೆಗೆ ಒಳ್ಳೆ ಹೆಸರು ತರಬೇಕು ಎಂದರು.