News Karnataka Kannada
Saturday, May 04 2024
ಬೆಂಗಳೂರು

ಬೆಂಗಳೂರು: ಗುಜರಾತಿನಲ್ಲಿ ಸ್ಯಾಂಟ್ರೊ ರವಿ ಬಂಧನದ ಬಗ್ಗೆ ಅನುಮಾನಗಳಿವೆ ಎಂದ ಕುಮಾರಸ್ವಾಮಿ

hubballi-i-t-raids-on-opposition-will-be-possible-for-another-two-months-hdk
Photo Credit : Facebook

ಬೆಂಗಳೂರು: ರಾಜ್ಯದ ಗೃಹ ಸಚಿವರು ಗುಜರಾತ್ ನಲ್ಲಿದ್ದಾರೆ. ಸ್ಯಾಂಟ್ರೊ ರವಿ ಕೂಡ ಅಲ್ಲೇ ಇದ್ದ, ಗೃಹ ಸಚಿವರು ಗುಜರಾತ್ ಗೆ ಯಾವಾಗ ಹೋದರು ಎನ್ನುವುದೇ ಯಕ್ಷಪ್ರಶ್ನೆ. ಗುಜರಾತಿನಲ್ಲೂ ಬಿಜೆಪಿ ಸರ್ಕಾರವಿದೆ. ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಯಾಂಟ್ರೊ ರವಿಯನ್ನು ಗುಜರಾತ್ನಿಂದ ರಾಜ್ಯಕ್ಕೆ ಕರೆತಂದ ಪೊಲೀಸರು ಅಜ್ಞಾತ ಸ್ಥಳಕ್ಕೆ ಮಾಧ್ಯಮಗಳ ಕಣ್ತಪ್ಪಿಸಿ ರಾಜಾತಿಥ್ಯ ಕೊಟ್ಟು ಕರೆದೊಯ್ದಿದ್ದಾರೆ. ವಿಐಪಿ ಗೇಟ್ ಮೂಲಕ ಸ್ಯಾಂಟ್ರೊ ರವಿಯನ್ನು ಎಲ್ಲರ ಕಣ್ತಪ್ಪಿಸಿ ಕರೆತಂದದ್ದು ಏಕೆ? ವಿಐಪಿ ಗೇಟ್ ಇರುವುದು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಮಾತ್ರ. ಒಬ್ಬ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಇಷ್ಟೊಂದೆಲ್ಲ ರಾಜಾತಿಥ್ಯ ಏಕೆ? ಎಂದು ಅವರು ಪ್ರಶ್ನಿಸಿದರು.

ಸ್ಯಾಂಟ್ರೊ ರವಿಯನ್ನು ಎರಡು-ಮೂರು ದಿನಗಳ ಹಿಂದೆಯೇ ಗುಜರಾತ್ನಲ್ಲಿ ಬಂಧಿಸಿದ್ದಾರೆ. ಏನೆಲ್ಲಾ ಸಾಕ್ಷ್ಯ ಇಟ್ಟುಕೊಂಡಿದ್ದನೋ ಅದನ್ನೆಲ್ಲ ಕಿತ್ತುಕೊಂಡು ಬಂದಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಇವನ್ನದ್ದೇ ನೇರಪಾತ್ರವಿದೆ. ಮೈಸೂರಿನಲ್ಲಿ ಮಹಿಳೆಯೊಬ್ಬರು ದಾಖಲಿಸಿದ ಪ್ರಕರಣ ಬಿಟ್ಟು ಉಳಿದ ಪ್ರಕರಣವನ್ನು ಯಾವ ರೀತಿ ತನಿಖೆ ಮಾಡುತ್ತಾರೆ?. ಸರ್ಕಾರದ ಆಡಳಿತ, ದಂಧೆಕೋರರು ದಲ್ಲಾಳಿಗಳಿಂದ ನಡೆಯಬೇಕು ಅಂದರೆ ಈ ಸರ್ಕಾರ ಮುಂದುವರೆಯಬೇಕಾ? ಎಂದು ಅವರು ಗುಡುಗಿದರು.

ನನ್ನ ಆಡಳಿತ ಇದ್ದಾಗ ನಾನು ಬಿಗಿಯಾಗಿ ಇಟ್ಟುಕೊಂಡಿದ್ದೆ. ಜನರಿಗೆ ಉತ್ತರ ಕೊಡಬೇಕಾದವರು ಸರ್ಕಾರದವರೇ. ಸ್ಯಾಂಟ್ರೋ ರವಿ ರಾಜರೋಷವಾಗಿ ಮಾತಾಡ್ತಾನೆ ಅಂದರೆ ಹೇಗೆ?. ಪೂನಾದಿಂದ ಗುಜರಾತ್ ಗೆ ಯಾಕೆ ಕರೆಸಿಕೊಂಡರು. ಅವನಿಗೆ ಏನು ಪ್ರಾಮೀಸ್ ಮಾಡಿ ಕರೆಸಿಕೊಂಡರು. ಒಂದು ತಿಂಗಳು ಸುದ್ದಿಯಲ್ಲಿ ಇರ್ತಾರೆ ನಂತರ ಜನ ಮರೆತಾಗ ಮುಚ್ಚಿ ಹಾಕುತ್ತಾರೆ ಅಷ್ಟೆ ಎಂದು ಅವರು ಹೇಳಿದರು.

ಗೃಹ ಸಚಿವರು ಯಾಕೆ ಗುಜರಾತ್ ಗೆ ಹೋದರು. ಸಾಬರಮತಿ ಆಶ್ರಮದಲ್ಲಿ ಗಾಂಧಿ ಪ್ರತಿಮೆ ಬಳಿ ಫೋಟೊ ತೆಗೆಸಿಕೊಳ್ಳುವುದು, ವಿಡಿಯೋ ಕ್ಲಿಪ್ಪಿಂಗ್ ಯಾಕೆ ಕಳಿಸಿರುವುದು. ನನಗೆ ಅನುಮಾನ ಅಂತೂ ಇದೆ. ಪೂನಾದಲ್ಲೇ ಅರೆಸ್ಟ್ ಮಾಡಬಹುದಿತ್ತಲಾ?. ಆತನನ್ನು ಗುಜರಾತ್ ಗೆ ಯಾಕೆ ಕರೆಸಿಕೊಂಡರು. ನಾನೇ ಎಲ್ಲ ಹೇಳೋದಾದ್ರೆ ಸರ್ಕಾರ ತನಿಖೆ ಮಾಡಬೇಕಲಾ?, ವಾಸ್ತವಾಂಶ ಹೇಳಬೇಕಲ್ಲವೇ? 40 ಪರ್ಸೆಂಟ್ ಸರ್ಕಾರ ಅಂತಾರೆ. ಒಂದು ದಾಖಲೆ ಕೊಡಕಾಗುತ್ತದೆಯೇ?. ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಸಾಕಲ್ಲವೇ?. ಇಂತಹ ಕೆಟ್ಟ ಸರ್ಕಾರ ಹಿಂದೆ ಬಂದಿಲ್ಲ, ಮುಂದೆ ಬರುವುದಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಕೇಸರಿ ಬಟ್ಟೆ ಬಗ್ಗೆ ಮಾತಾಡೋವ್ರು, ಅದೇ ಕೇಸರಿ ಬಟ್ಟೆನೇ ಇಂಥವರು ಹೆಗಲಿಕೆ ಹಾಕಿದ್ದಲ್ವಾ. ಅದಕ್ಕೆ ಗೌರವವಿಲ್ಲವೆ? ಎಂದ ಹೆಚ್ ಡಿಕೆ, ಜೆಡಿಎಸ್ ಜನರ ಟೀಂ, ಕಾಂಗ್ರೆಸ್-ಬಿಜೆಪಿ ಅವರು ಹೇಳಿದ್ದಾರಲ್ಲಾ ಅಲ್ಲೇ ಅರ್ಥ ಮಾಡಿಕೊಳ್ಳಿ. ಇವರು ಯಾವ ಟೀಂ ಅಂತ. ಬಿಜೆಪಿ ಆಡಳಿತ ಮಾಡಬೇಕಾದರೆ ಯಾವ ಕೃಪಾಕಟಾಕ್ಷ ಇತ್ತು ಎಂದರು.

ಈ ಸರ್ಕಾರದಲ್ಲಿ ಸ್ಯಾಂಟ್ರೋ ರವಿಯಂಥವರು ತುಂಬಾ ಜನ ಇದ್ದಾರೆ. ಕೆಲವು ಮಂತ್ರಿಗಳು, ರಾಜಕಾರಣಿಗಳಲ್ಲಿ ಸಂಪರ್ಕದಲ್ಲಿ ಇದ್ದಾರೆ. ನಾನು ಅಂದು ಹೇಳದೇ ಹೋಗಿದ್ರೆ ಇದನ್ನು ಮುಚ್ಚಿ ಹಾಕ್ತಿದ್ರು ಅಷ್ಟೆ. ಕೇರಳ ಅಲ್ಲಿ ಇಲ್ಲಿ ಹೋಗಿದ್ದ ಅಂತ ಹೇಳಿದ್ದರು. ನಾನು ಯಾಕೆ ಮೊಸರಲ್ಲಿ ಕಲ್ಲು ಹುಡುಕಲಿ. ಪಾರದರ್ಶಕವಾಗಿ ತನಿಖೆ ನಡೆಸುತ್ತಿದ್ದರೆ ಹೇಳಲಿ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೀಸಲಾತಿಗಾಗಿ ಮಠಾಧೀಶರನ್ನು ಎತ್ತಿಕಟ್ಟುತ್ತಿರುವ ರಾಜಕಾರಣಿಗಳು:

ಈಗಿನ ರಾಜಕಾರಣಿಗಳು ಮೀಸಲಾತಿ ಕುರಿತಂತೆ ಮಠಾಧೀಶರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರನ್ನು ಬಿಸಿಲಲ್ಲಿ ಕೂರಿಸಿ ಹೋರಾಟ ಮಾಡಿಸುತ್ತಿದ್ದಾರೆ. ಮೀಸಲಾತಿ ಕುರಿತು ಸರ್ಕಾರಕ್ಕೆ ಅರಿವಿಲ್ಲವೇ? ರಾಜಕಾರಣಿಗಳು ಮಠಾಧೀಶವನ್ನು ಮುಂದೆ ಬಿಟ್ಟು ಹೋರಾಟವನ್ನು ಮಾಡಿಸುತ್ತಿದ್ದಾರೆ. ಮೀಸಲಾತಿ ಅರ್ಥ ಏನು?. ಹೊದಕಡೆಯಲ್ಲಾ ಸದಾಶಿವ ಆಯೋಗ ವರದಿ ಮಾಡಿ ಅಂತಿದ್ದಾರೆ. ನಾವು ಈ ವರದಿ ಜಾರಿಗೆ ತಂದರೇ ಬೋವಿ, ಬಂಜಾರ ಸಮುಧಾಯಕ್ಕೆ ಅನ್ಯಾಯ ಆಗುತ್ತೆ ಅನ್ನೊ ಭಯವಿದೆ. ನಾನು ಅಧಿಕಾರಕ್ಕೆ ಬಂದ್ರೆ ಎಲ್ಲರನ್ನೂ ಕರೆದು ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೆನೆ ಎಂದು ತಿಳಿಸಿದರು.

ರಾಜಕಾರಣಿಗಳಿಂದನೇ ಸಮಸ್ಯೆ ಆರಂಭವಾಗಿದೆ. ಪರ್ಸೆಂಟೆಜ್ ಹೆಚ್ಚು ಮಾಡಿ ಅಂತ ಕೇಳಲಾಗ್ತಿದೆ ಆದರೆ, ಸರ್ಕಾರಿ ನೌಕರರು, ಸಮುದಾಯ ಪರಿಸ್ತಿತಿ ಎಲ್ಲಾ ಅಧ್ಯಯನ ಆಗಬೇಕು. ಅವರಿಗೆ ಹೆಚ್ಚಳ ಮಾಡಿದ್ರು ನಮಗೂ ಹೆಚ್ಚಳ ಮಾಡಿ ಅನ್ನುವುದಲ್ಲ. 12 % ಹೆಚ್ಚಳ ಮಾಡಿ ಅನ್ನೊದಕ್ಕೆ ಸರಿಯಾದ ಮಾಹಿತಿ ಕೊಟ್ಟು ಚರ್ಚೆ ಮಾಡಬೇಕು. ಮಠಾಧೀಶರ ಭಾವನೆ ತಪ್ಪು ಅನ್ನೋದಿಲ್ಲ. ನಮ್ಮನ್ನು ಈ ವರ್ಗಕ್ಕೆ ಸೇರಿಸಿ ಅಂತ ಕೇಳಿದಾಗ ಯಾವ ಆಧಾರದ ಮೇಲೆ ಕೇಳುತ್ತಿದ್ದೇವೆ. ಯಾವ ಮಾರ್ಗ ಸೂಚಿ ಇದೆ ಅನ್ನೋದನ್ನ ನೋಡಬೇಕು. ಜನಗಳನ್ನು ಬೀದಿಯಲ್ಲಿ ಬೆಂಕಿ ಹಚ್ಚಿಸಿ ಹೋರಾಟ ಮಾಡಿಸುವುದು ಯಾಕೆ? ಸರ್ಕಾರಕ್ಕೆ ವಿವರವಾಗಿ ವಾಸ್ತವಾಂಶ ಹೇಳಬೇಕಲಾ, ಅದಕ್ಕೆ ನಾನು ಅಂದು ಹೇಳಿದ್ದು. ರಂಗ ಅಲ್ಲ ಮಂಗ ಅಂತ. ಮೀಸಲಾತಿ ವ್ಯವಸ್ಥೆಯಲ್ಲಿ ಇಂಥಹ ಬೇಡಿಕೆಗಳು ಬಂದಾಗ ಯೋಚನೆ ಮಾಡಬೇಕು ಎಂದರು.

ಸದಾಶಿವ ಆಯೋಗದ ವರದಿ ಬಂದು ಎಷ್ಟು ವರ್ಷ ಆಯ್ತು. ನಾವು ಈ ಕಾರ್ಯಕ್ರಮ ಕೊಡೋಕೆ ಹೋದ್ರೆ ಏನಾಗುತ್ತದೆ ಅಂತ ಹೇಳಿದ್ದೆ. ಅವರಿಗೂ ಕೊಟ್ರಿ ನಮಗೂ ಕೊಡಿ ಅಂತ ಅಂದಾಗ, ಎಷ್ಟು ಜನರಿಗೆ ಮೋಸ ಮಾಡ್ತೀರ ನೀವು. ನಮ್ಮ ಸಮಾಜಕ್ಕೆ ಶೇ.12 ರಷ್ಟು ಹೆಚ್ಚಿಸುವುದಕ್ಕೆ ಯಾವ ಆಧಾರದಲ್ಲಿ ಕೊಡಬೇಕು ಸರ್ಕಾರ. ಇಂಟರ್ನಲ್ ರಿಪೋರ್ಟ್ ತೆಗೆದುಕೊಂಡು ಚರ್ಚಿಸಿ ಎಂದು ನಮ್ಮ ಸ್ವಾಮೀಜಿಗೂ ಹೇಳಿದ್ದೆ ಎಂದು ಹೇಳಿದರು.

ಊಹಾಪೋಹಕ್ಕೆ ನಕ್ಕ ಹೆಚ್ಡಿಕೆ:

ನಾನು ಜನಾರ್ಧನರೆಡ್ಡಿ ಅವರ ಜೊತೆ ಕೈ ಜೋಡಿಸಿಲ್ಲ, ಜೋಡಿಸುವುದೂ ಇಲ್ಲ. ನಮ್ಮ ಮತ್ತು ಅವರ ಕೈ ದೂರ. ಇದೊಂದು ಊಹಾ ಪೋಹ ಸುದ್ದಿ ಅಷ್ಟೆ ಎಂದು ಹೇಳಿದರು.

ಸಿ.ಪಿ.ಯೋಗೇಶ್ವರ್ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಅವರ ಬಗ್ಗೆ ಮಾತಾಡುವಷ್ಟು ಅಥವಾ ಪ್ರಾಮುಖ್ಯತೆ ಕೊಡೋದು ಬೇಡ ಎಂದರು. ಹಾಸನದಲ್ಲಿ ಕುಟುಂಬದಿಂದ ಮತ್ತೊಬ್ಬರು ಸ್ಪರ್ಧೆ ವಿಚಾರಕ್ಕೆ ಹಾಗೂ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿಕೆಗೆ, ಅವರು ಪ್ರವೋಕ್ ಮಾಡುತ್ತಿದ್ದಾರೆ ಅನ್ನುವುದು ನನ್ನ ಅಭಿಪ್ರಾಯ. ಹಾಸನದಲ್ಲಿ ಚುನಾವಣೆ ಗೆಲ್ಲಲು ನಮ್ಮ ಕುಟುಂಬದವರೇ ನಿಲ್ಲಬೇಕಿಲ್ಲ. ಸಾಮಾನ್ಯ ಕಾರ್ಯಕರ್ತರು ಕೊಟ್ಟರೂ ಗೆಲ್ಲುತ್ತಾರೆ.

ಕಾರ್ಯಕರ್ತರನ್ನ ನಿಲ್ಲಿಸಿ ಗೆಲ್ಲುವ ಶಕ್ತಿಯಿದೆ. ಹಾಸನ ಜಿಲ್ಲೆಯನ್ನು ಹೆಚ್.ಡಿ.ರೇವಣ್ಣನರಿಗೆ ಬಿಡಲಾಗಿದೆ. ಅವರು ಎಲ್ಲವೂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಯಾರೇ ಹೋದರೂ ಪಕ್ಷಕ್ಕೆ ಧಕ್ಕೆ ಇಲ್ಲ:

ನಮ್ಮ ಪಕ್ಷ ನಾಯಕರನ್ನು ತಯಾರು ಮಾಡುವ ಪಕ್ಷ. ನಮ್ಮಿಂದ ಹೋಗಿರೋರ ಚರಿತ್ರೆ ನೋಡಿ. ಬೇರೆ ಪಕ್ಷಗಳಿಗೆ ಹೋಗಿ ಏನಾಗಿದ್ದಾರೆ ಅವರೆಲ್ಲ. ನಮ್ಮಿಂದ ಯಾರೇ ಹೋದರೂ ನಮ್ಮ ಪಕ್ಷಕ್ಕೆ ಧಕ್ಕೆ ಇಲ್ಲ. ಇನ್ನು ಕೆಲ ದಿನಗಳಲ್ಲಿ 50-60 ಸೀಟ್ ಗಳಿಗೆ ಎರಡನೆ ಪಟ್ಟಿ ಬಿಡುಗಡೆ ಮಾಡುತ್ತೇನೆ. ಹೊಸಬರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಡು ಬರುತ್ತೇವೆ. ಇನ್ನು ಬೆಂಗಳೂರು ನಗರದಲ್ಲಿ ಈ ಬಾರಿ 6 ರಿಂದ 8 ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು