ಚಿತ್ರದುರ್ಗ: ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ವಿರುದ್ಧ ಇದೀಗ ದೂರು ದಾಖಲಾಗಿದೆ.
ಹಿರಿಯೂರಲ್ಲಿ ಡಾ. ಬಿಆರ್ ಅಂಬೇಡ್ಕರ್, ಬಾಬು ಜಗಜೀನವರಾಂ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಂಜನಾಥ್, ಚುನಾವಣೆ ವೇಳೆ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ ನರೇಂದ್ರ ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೀತಿನಿ ಎಂದು ಹೇಳಿಕೆ ನೀಡಿದ್ದರು.
ಚಿತ್ರದುರ್ಗ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಅವರು ನೀಡಿದ ದೂರಿನ ಅನ್ವಯ ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಹೇಳಿಕೆ ಭಾರೀ ವೈರಲ್ ಆಗಿದ್ದು, ಮಂಜುನಾಥ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈಗ ಕಲ್ಲೇಶಯ್ಯ ಎನ್ನುವರು ಮಂಜುನಾಥ್ ವಿರುದ್ಧ ದೂರು ನೀಡಿದ್ದು, ಪ್ರದಾನಿ ಹುದ್ದೆಗೆ ಅಪಮಾನ, ಶಾಂತಿ ಕದಡುವ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.