ಬೆಂಗಳೂರು: ಹಲವು ಸಂಕಷ್ಟಗಳಿಗೆ ಸಿಲುಕಿರುವ ದೇಶದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಇದೀಗ ವೆಚ್ಚ ಕಡಿತದ ಉದ್ದೇಶದಿಂದ ಬೆಂಗಳೂರಿನಲ್ಲಿನ ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ. ಕಳೆದ ಕೆಲ ತಿಂಗಳಿನಿಂದ ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಬೈಜುಸ್ ಈಗ ಕಲ್ಯಾಣಿ ಟೆಕ್ ಪಾರ್ಕ್ನಲ್ಲಿರುವ 5.58 ಲಕ್ಷ ಚದರ ಅಡಿಯ ತನ್ನ ಕಚೇರಿ ಸ್ಥಳವನ್ನು ತೆರವುಗೊಳಿಸುತ್ತಿದೆ ಎಂದು ಮನಿ ಕಂಟ್ರೋಲ್ ವೆಬ್ಸೈಟ್ ವರದಿ ಮಾಡಿದೆ.
ಬೈಜುಸ್ ಸಂಸ್ಥೆ ಬೆಂಗಳೂರು ಮೂಲದ್ದಾಗಿದ್ದು ಇಲ್ಲಿ 3 ಕಚೇರಿಗಳನ್ನು ಹೊಂದಿದೆ. ಅದರಲ್ಲಿ ಬ್ರೂಕ್ಫೀಲ್ಡ್ ಪ್ರದೇಶದಲ್ಲಿರುವ ಕಲ್ಯಾಣಿ ಟೆಕ್ ಪಾರ್ಕ್ನಲ್ಲಿನ ಅದರ ಕಚೇರಿ ಅತಿದೊಡ್ಡದು. ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರೆಸ್ಟೀಜ್ ಟೆಕ್ ಪಾರ್ಕ್ನಲ್ಲಿಯದ್ದು ಒಂದು ಸೇರಿದಂತೆ ಬೈಜುಸ್ನ ಇನ್ನೆರಡು ಕಚೇರಿಗಳಿವೆ. ಪ್ರೆಸ್ಟೀಜ್ ಟೆಕ್ ಪಾರ್ಕ್ನಲ್ಲಿ ಬೈಜುಸ್ ಒಟ್ಟು 9 ಮಹಡಿಗಳನ್ನು ಹೊಂದಿದ್ದು ಅದರಲ್ಲಿ 2 ಮಹಡಿಗಳ ಕಚೇರಿ ಸ್ಥಳವನ್ನು ತೆರವುಗೊಳಿಸಿದೆ.
ಒಂದು ಕಾಲದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದ ಬೈಜುಸ್ ಸಂಸ್ಥೆ ಇದೀಗ ಹಣಕಾಸು ಸಂಕಷ್ಟದ ಜೊತೆಗೆ ತೆರಿಗೆ ವಿವಾದಗಳಿಗೂ ಸಿಲುಕಿದೆ. ಉದ್ಯೋಗಿಗಳಿಗೆ ಕೊಡುವ ಪಿಎಫ್ ಅನ್ನೂ ಸಂಸ್ಥೆ ಪಾವತಿಸಿಲ್ಲದಿರುವುದು ಬೆಳಕಿಗೆ ಬಂದಿದೆ.