ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ, ಒಂದು ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಶುಕ್ರವಾರ ನಡೆದ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಟೀಲ್, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಒಂದು ವಾರದೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ ಎಂದರು.
ನಮ್ಮ ಪ್ರೋಗ್ರೆಸ್ ಕಾರ್ಡ್ ಆಧಾರದಲ್ಲಿ ಮತ ಯಾಚಿಸುತ್ತಿದ್ದೇವೆ. ಬಿಜೆಪಿ ಸರ್ಕಾರದ ಎಲ್ಲಾ ಕೆಲಸಗಳನ್ನು ಕರ್ನಾಟಕದ ಜನತೆ ನೋಡಿದ್ದಾರೆ, ಮೇ 13 ಚುನಾವಣಾ ಫಲಿತಾಂಶ ಪಕಟವಾದಾಗ ವಿಜಯೋತ್ಸವ ಆಚರಿಸುವುದು ನಾವೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆ ಬಂದಾಗ ಒಂದು ಪಕ್ಷದಿಂದು ಇನ್ನೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ. ಚುನಾವಣೆಯಲ್ಲಿ ಯಾರು ಸರಿ ಮತ್ತು ತಪ್ಪು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಪಕ್ಷಾಂತರ ಪರ್ವದ ಕುರಿತು ಹೇಳಿದರು.