News Karnataka Kannada
Sunday, April 28 2024
ಬೆಂಗಳೂರು ನಗರ

ಯೋಗ ನಮ್ಮ ಸಂಸ್ಕೃತಿಯ ಹೆಮ್ಮೆಯ ಕೊಡುಗೆ- ಥಾವರ್ ಚಂದ್ ಗೆಹ್ಲೋಟ್

Yoga is a Proud Contribution to Our Culture- Governor Thaawarchand Gehlot
Photo Credit : By Author

ಬೆಂಗಳೂರು, ಜೂ.21: ಯೋಗವು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ಮಿಳಿತಗೊಂಡಿದೆ. ಇಂದು ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ, ಅದಕ್ಕಾಗಿಯೇ ಭಾರತವನ್ನು ವಿಶ್ವದ ಯೋಗ ಗುರು ಎಂದು ಕರೆಯಲಾಗುತ್ತದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್ಯ ಇಲಾಖೆ ಇಂದು ವಿಧಾನಸೌಧದ ಮುಂಬಾಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಯೋಗ-ವಸುದೈವ ಕುಟುಂಬಕ್ಕಾಗಿ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯಕರ ಜೀವನಕ್ಕಾಗಿ ಯೋಗ ಅವಶ್ಯಕವಾಗಿದೆ ಎಂದರು.

ಜನರನ್ನು ದೇಶ-ಭಾಷೆ ಮೀರಿ ಸಂಪರ್ಕಿಸುವ ಮತ್ತು ಆರೋಗ್ಯ ಸಮಾಜ ಕಟ್ಟುವ ಶಕ್ತಿ ಯೋಗಕ್ಕೆ ಇದೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗ ಉತ್ತಮ ಮಾರ್ಗವಾಗಿದೆ. ಇಂದು ಪ್ರಪಂಚದಾದ್ಯಂತ ಜನರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗಾಸನದ ಅಭ್ಯಾಸದ ಮೂಲಕ, ನಾವು ಆರೋಗ್ಯಕರ ಮನಸ್ಸು ಮತ್ತು ದೇಹವನ್ನು ಪಡೆಯಬಹುದು. ಯೋಗದ ಈ ಉಪಯುಕ್ತತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಯೋಗ ದಿನವನ್ನು ಆಚರಿಸಲಾಗುತ್ತದೆ.

2014 ರಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ವಿಶ್ವದ ಎಲ್ಲಾ ದೇಶಗಳಿಗೆ ಕರೆ ನೀಡಿದರು ಮತ್ತು ಇಂದು ವಿಶ್ವದಲ್ಲಿ ಪ್ರತಿ ವರ್ಷ ಯೋಗ ದಿನವನ್ನು 172 ಕ್ಕೂ ಹೆಚ್ಚು ದೇಶಗಳು ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.

ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನದ ಥೀಮ್ “ವಸುಧೈವ ಕುಟುಂಬಕ್ಕಾಗಿ ಯೋಗ”. ಇದು ನಮ್ಮ ಭಾತೃತ್ವ ಮತ್ತು ವಿಶ್ವ ಸಹೋದರತ್ವದ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಜನವರಿ 15, 2023 ರಂದು 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಆಯೋಜಿಸುವ ಸಂದರ್ಭದಲ್ಲಿ, ದೊಡ್ಡ ಪ್ರಮಾಣದ ಯೋಗವನ್ನು ಆಯೋಜಿಸುವ ಮೂಲಕ ಯೋಗದ ಗಿನ್ನೆಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ಕರ್ನಾಟಕ ಸರ್ಕಾರವು “ಪ್ರತಿ ಮನೆಯಲ್ಲಿ ಯೋಗ” ಉದ್ದೇಶದ ಮೂಲಕ ಕರ್ನಾಟಕ ರಾಜ್ಯವನ್ನು ಭಾರತದ ಪ್ರಮುಖ ಯೋಗ ರಾಜ್ಯವನ್ನಾಗಿ ಮಾಡಲು ಶ್ರಮಿಸುತ್ತಿದೆ. ಯೋಗವು ಭಾರತದ ಪವಿತ್ರ ಭೂಮಿಯಿಂದ ಹುಟ್ಟಿಕೊಂಡಿತು, “ವಸುಧೈವ ಕುಟುಂಬಕಂ” ಎಂಬ ಮನೋಭಾವವನ್ನು ಉತ್ತೇಜಿಸುತ್ತದೆ ಮತ್ತು ಮಾನವೀಯತೆಗೆ ವರವಾಗಿ ಪರಿಣಮಿಸುವ ಮೂಲಕ ಜನರನ್ನು ಸಂಪರ್ಕಿಸುತ್ತದೆ.

ನಾನು ಸ್ವತಃ ಯೋಗ ಪಟುವಾಗಿದ್ದು, ಪ್ರತಿದಿನ ಯೋಗ ಮತ್ತು ಪ್ರಾಣಾಯಾಮದ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಿದ್ದೇನೆ. ತಾವೆಲ್ಲರೂ ಯೋಗಾಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಯೋಗದ ಮಹತ್ವವನ್ನು ವಿವರಿಸುವ ಮೂಲಕ ಯೋಗದತ್ತ ಜಗತ್ತಿನ ಜನರನ್ನು ಪ್ರೇರೇಪಿಸಬೇಕೆಂದು ಮನವಿ ಮಾಡಿದರು.

ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಮಾತನಾಡಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ, ಆರೋಗ್ಯ ಮತ್ತು ಬಲಿಷ್ಠ ಸಮಾಜಕ್ಕಾಗಿ ಯೋಗ ಅಗತ್ಯವಾಗಿದೆ. ನಮ್ಮ ಋಷಿಮುನಿಗಳು ನೀಡಿರುವ ಈ ಯೋಗವನ್ನು ಉಳಿಸಿಕೊಳ್ಳುವುದು ನಮ್ಮ ಜವಬ್ಧಾರಿ, ಮಾನಸಿಕ ಒತ್ತಡ ಎಲ್ಲ ರೋಗಗಳ ಮೂಲ, ಯೋಗ ಅದಕ್ಕೆ ಮದ್ದು ಎಂದು ಹೇಳಿದರು.

ಪ್ರಸ್ತುತ ವಿವಿಧ ರೀತಿಯ ಯೋಗಗಳು ವಿವಿಧ ಹೆಸರಿನಲ್ಲಿ ಚಾಲ್ತಿಯಲ್ಲಿದ್ದು, ಅವುಗಳ ಬಗ್ಗೆ ಸರ್ಕಾರ ಗಮನಹರಿಸಿ ಅದಕ್ಕೊಂದು ಮಾನ್ಯತೆ ಹೊಂದಿದೆ ಪಠ್ಯಪುಸ್ತಕದ ರೂಪ ನೀಡಬೇಕು, ಯೋಗಕ್ಕೊಂದು ಅಧಿಕೃತ ಸಿಲಬಸ್ ಮಾಡಿ ಅದಕ್ಕೊಂದು ಮಾನ್ಯತೆ ನೀಡಿ ಸರ್ಕಾರದಿಂದ ನಿರ್ಧಿಷ್ಟ ರೂಪ ನೀಡಬೇಕು ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು. ಎಲ್ಲರಿಗೂ ಯೋಗದಿನದ ಶುಭಾಶಯಗಳನ್ನು ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಅವರು ಮಾತನಾಡಿ ಸಾವಿರಾರು ವರ್ಷಗಳಿಂದ ಯೋಗ ನಮ್ಮ ಸಂಪ್ರದಾಯದ ಭಾಗವಾಗಿದೆ, ವಿಶ್ವಕ್ಕೆ ಯೋಗದ ಕೊಡುಗೆ ನಮ್ಮ ಹೆಮ್ಮೆ. ಇತ್ತೀಚಿಗೆ ಜಗತ್ತಿಗೆ ಯೋಗದ ಅರಿವಾಗಿದೆ ಮತ್ತು ಬೇಡಿಕೆ ಹೆಚ್ಚಿದೆ, ಯೋಗ ಚುರುಕುತನವನ್ನು ಹೆಚ್ಚಿಸುತ್ತದೆ, ಮಾನಸಿಕವಾಗಿ ಆರೋಗ್ಯವಾಗಿಡುತ್ತದೆ. ಇತ್ತೀಚಿನ ಹೊಸ ರೋಗಗಳಿಗೆ ಯೋಗ ಮದ್ದು, ಬದುಕಿನ ಶೈಲಿ, ಆಹಾರ ಬದಲಾಗಿದೆ, ಮಾಲಿನ್ಯ ಹೆಚ್ಚಾಗಿದೆ. ಯೋಗ ಅಭ್ಯಾಸ ಮಾಡಿದವರಿಗೆ ಮನಸ್ಸು ಮತ್ತು ದೇಹ ಹತೋಟಿಯಲ್ಲಿರುತ್ತದೆ. ಯೋಗವನ್ನು ಸರ್ಕಾರದಿಂದ ಪ್ರೋತ್ಸಾಹಿಸಲಾಗುತ್ತದೆ, ಜನರು ನಿತ್ಯ ಜೀವನದಲ್ಲಿ ಯೋಗವನ್ನು ಅಭ್ಯಾಸವಾಗಿ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ರಿಜ್ವಾನ್ ಅರ್ಷದ್ ಅವರು ಈ ದಿನ ಮೊದಲ ಬಾರಿ ಯೋಗ ಮಾಡಿದ್ದೇನೆ, ಇಂದು ಯೋಗ ಮಾಡಿದ ನಂತರ ನನಗೆ ಅರಿವಾಗಿದೆ ಇದನ್ನು ಮುಂದುವರೆಸಬೇಕೆಂದು, ಯೋಗ ಸಾವಿರಾರು ವರ್ಷಗಳಿಂದ ನಮ್ಮ ಸಂಸ್ಕೃತಿಯ ಭಾಗವಾಗಿದೆ, ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಯೋಗ ಸಾವಿರಾರು ವರ್ಷಗಳಿಂದ ಜನಪ್ರಿಯತೆ ಹೊಂದಿದೆ, ನಮ್ಮ ಸಂಸ್ಕೃತಿ ಭಾಗವಾಗಿದೆ. ಸಾರ್ವಜನಿಕರು ಯೋಗದ ಕಡೆ ನಡೆಯುವ ಮೂಲಕ ತಮ್ಮ ಜೀವ ಮತ್ತು ಜೀವನವನ್ನು ಆರೋಗ್ಯವಾಗಿಟ್ಟುಕೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶರವಣ, ಕ್ರೀಡಾಪಟುಗಳಾದ ವೆಂಕಟೇಶ್ ಪ್ರಸಾದ್, ಅಂಜು ಬಿ ಜಾರ್ಜ್, ಚಲನಚಿತ್ರ ನಟಿ ಭಾವನ, ಆಯುಷ್ ಇಲಾಖೆಯ ಕಾರ್ಯದರ್ಶಿ ಟಿ ಅನಿಲ್ ಕುಮಾರ್, ಆಯುಕ್ತರಾದ ಜೆ ಮಂಜುನಾಥ್, ಶ್ವಾಸಗುರು ಖ್ಯಾತಿಯ ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು