News Karnataka Kannada
Saturday, April 27 2024
ಬೆಂಗಳೂರು ನಗರ

ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಓಟ್ ಫೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ

Launch of Voting Festival at Church Street, Bangalore
Photo Credit : G Mohan

ಬೆಂಗಳೂರು: ಮತದಾನ ಯಶಸ್ವಿಗೊಳಿಸಲು ಯುವಸಮೂಹವೇ ವಿಧಾನಸಭಾ ಚುನಾವಣೆಯ ರಾಯಭಾರಿಗಳು. ಈ ಯುವಸಮೂಹವು ತಮ್ಮ ತಮ್ಮ ನೆರೆಹೊರೆಯ ಪ್ರದೇಶದ ಜನರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಈ ಬಾರಿಯ ಚುನಾವಣೆಯನ್ನು ಯಶಸ್ವಿಗೊಳಿಸಬೇಕೆಂದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರೆ ನೀಡಿದರು.

ಅವರು ಇಂದು ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಅಂಗವಾಗಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಆಯೋಜಿಸಲಾದ ಓಟ್ ಫೆಸ್ಟ್ (ಮತದಾನದ ಹಬ್ಬ) ಕಾರ್ಯಕ್ರಮವನ್ನು ಇಂದು ಉದ್ಘಾಟಿಸಿ ಮಾತನಾಡಿದರು.

ಮೇ 10 ರಂದು ರಾಜ್ಯದ ಜನರು ತಪ್ಪದೇ ತಮ್ಮ ಮತಗಟ್ಟೆ ಭೇಟಿ ನೀಡಿ ಮತದಾನ ಮಾಡಲೇಬೇಕೆಂದು ನಾಗರಿಕರಿಗೆ ಪ್ರೇರಣೆ ನೀಡುವ ಆಶಯದಿಂದ ಇಂದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನರಲ್ಲಿ ಮತದಾನದ ಬಗ್ಗೆ ಅರಿವು ಹಾಗೂ ಉತ್ಸಾಹ ಮೂಡಿಸಲು ಇಂದಿನ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಚುನಾವಣೆಯಲ್ಲಿ ಮೊದಲನೇ ಬಾರಿ ಮತದಾನ ಮಾಡುವ ಯುವಕರ ಸಂಖ್ಯೆ 1 ಲಕ್ಷ ಮೀರಿರುವುದು ದಾಖಲಾರ್ಹ ಸಂಗತಿ. 18 ತುಂಬಿರುವ ಯುವಕರು ಮೊದಲನೇ ಬಾರಿಗೆ ಮತದಾನ ಮಾಡಲು ಮುಂದೆ ಬರಬೇಕಿದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ 4000 ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್ ಗಳನ್ನು ಪ್ರಾರಂಭಿಸಲಾಗಿದೆ. ಕಾಲೇಜುಗಳಿಂದ 18 ತುಂಬಿರುವ ಯುವಕರ ಪಟ್ಟಿಯನ್ನು ಪಡೆದು ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ನಾಗರಿಕರು, ಅಂಗವಿಕಲರಿಗೆ ಮತಗಟ್ಟೆಗಳಲ್ಲಿ ಮತದಾನ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರು.

ವಿಧಾನಸಭಾ ಚುನಾವಣೆಯ ರಾಷ್ಟ್ರೀಯ ರಾಯಭಾರಿಯಾಗಿರುವ ರಾಹುಲ್ ದ್ರಾವಿಡ್ ರವರು ಮತದಾನ ಹಕ್ಕನ್ನು ಚಲಾಯಿಸುವಂತೆ ಪ್ರೋತ್ಸಾಹಿಸುತ್ತಿದ್ದಾರೆ.ಮತದಾನದ ಮೂಲ ಕರ್ತವ್ಯದಲ್ಲಿ ಎಲ್ಲರೂ ಭಾಗವಹಿಸಿ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರು ಮಾತನಾಡಿ, ಬೆಂಗಳೂರು ಜಾಗತಿಕ ನಗರವಾಗಿದ್ದು, ಗರಿಷ್ಠ ಪ್ರಮಾಣದಲ್ಲಿ ಮತದಾನವನ್ನು ದಾಖಲಿಸುವ ಗುರಿಯನ್ನು ಸಾಧಿಸಬೇಕಿದೆ. ಬೆಂಗಳೂರು ನಗರದ ಮತದಾನದ ಪ್ರಮಾಣ ಕಡಿಮೆಯಿದ್ದು, ಈ ಬಾರಿಯ ಚುನಾವಣೆಯಲ್ಲಿ ಈ ಪ್ರಮಾಣವನ್ನು ಸುಧಾರಿಸಲು ಹಾಗೂ ಯುವಸಮೂಹವನ್ನು ಮತಗಟ್ಟೆಯತ್ತ ಸೆಳೆಯಲು ಇಂದಿನ ಕಾರ್ಯಕ್ರಮ ಪೂರಕವಾಗಿದೆ. ಯುವಜನರು ತಮ್ಮ ಪ್ರದೇಶದ ನೆರೆಹೊರೆಯವರನ್ನೂ ಮತದಾನದ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹಿಸಬೇಕೆಂದು ಕೋರಿದರು. ಇಂದು ಹಮ್ಮಿಕೊಳ್ಳಲಾಗಿರುವ ಬೈಕ್ ರ್ಯಾಲಿ, ಯಕ್ಷಗಾನ, ಫ್ಲಾಶ್ ಮಾಬ್ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬಂದು ಮತದಾನ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಎಂದರು.

ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಮೇ 10 ರಂದು ರಾಜ್ಯಾದ್ಯಂತ ನಡೆಯಲಿದ್ದು, ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಓಟ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಬೈಕ್ ರ್ಯಾಲಿ, ಸಂಗೀತ, ಯಕ್ಷಗಾನ,ಬೀದಿ ನಾಟಕ ಹಾಗೂ ಫ್ಲಾಶ್ ಮಾಬ್ ಸೇರಿದಂತೆ ದಿನವಿಡೀ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆ ಹಾಗೂ ಇದರಿಂದಾಗಿ ಸಮುದಾಯದ ಮೇಲಿನ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಕಾರ್ಯಕ್ರಮದ ಅತಿಥಿಗಳು ಬೆಳಕು ಚೆಲ್ಲಿದರು.

ಚರ್ಚ್ ಸ್ಟ್ರೀಟ್ ನೆರೆದಿದ್ದ ಯುವಕರಲ್ಲಿ ಮತದಾನ ಬಗ್ಗೆ ಜಾಗೃತಿ , ವೋಟರ್ ಹೆಲ್ಪ್ ಲೈನ್ ಆಪ್ ಬಗ್ಗೆ ಮಾಹಿತಿ, ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳುವುದು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ಪ್ರಚುರಪಡಿಸಲಾಯಿತು. ಮತದಾನ ತಪ್ಪದೇ ಕೈಗೊಳ್ಳಲು ಭಾರತ ಚುನಾವಣಾ ಆಯೋಗದ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಸ್ಥಳೀಯ ಜನಪ್ರಿಯ ವ್ಯಕ್ತಿಗಳು ಬೈಕ್ ರ್ಯಾಲಿಯನ್ನು ಮುನ್ನಡೆಸಿ ಮುಂಬರುವ ಚುನಾವಣೆ ಹಾಗೂ ಮತದಾನದ ಮಾಹಿತಿಯನ್ನು ನೀಡಿದರು.

ಸ್ಥಳೀಯ ಕಲಾವಿದರು ಹಾಗೂ ರಂಗಕಲಾವಿದರಿಂದ ಬೀದಿ ನಾಟಕಗಳನ್ನು ಏರ್ಪಡಿಸಿ, ಮತದಾನ ಪ್ರಕ್ರಿಯೆಯ ಮಹತ್ವ , ಮತಚಲಾಯಿಸದೆ ಇದ್ದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಯಿತು. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮತದಾನದ ಬಗ್ಗೆ ಉಪಯುಕ್ತ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಮೂಲಕ ಓಟ್ ಫೆಸ್ಟ್ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಟಿ.ಕೆ.ದಯಾನಂದ, ಅಪರ ಮುಖ್ಯ ಚುನಾವಣಾಧಿಕಾರಿ ರಾಜೇಂದ್ರ ಚೋಳನ್, ವಿಶೇಷ ಚುನಾವಣಾಧಿಕಾರಿ ಎ.ವಿ.ಸೂರ್ಯಸೇನ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು