News Karnataka Kannada
Thursday, May 09 2024
ಬೆಂಗಳೂರು ನಗರ

ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಜನರ ಮೂಲಕವೇ ಉತ್ತರ ಕೊಡಿಸುತ್ತೇನೆ- ಹೆಚ್.ಡಿ.ಕುಮಾರಸ್ವಾಮಿ

Bengaluru: We are ready for an alliance, but conditions apply: HD Kumaraswamy
Photo Credit : IANS

ಬೆಂಗಳೂರು: ಕಾಂಗ್ರೆಸ್ ಬಿಜೆಪಿ ಪಕ್ಷಗಳು ಒಟ್ಟಾಗಿ ಜೆಡಿಎಸ್ ವಿರುದ್ಧ ಷಡ್ಯಂತ್ರ ರೂಪಿಸಿ, ಎ ಟೀಮ್, ಬಿ ಟೀಮ್ ಗಳಂತೆ ಕೆಲಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಮ್ಮ ವಿರುದ್ಧ ಒಳ ಒಪ್ಪಂದದ ಆರೋಪ ಮಾಡಿವೆ. ಎರಡೂ ಪಕ್ಷಗಳಿಗೆ ನಾಚಿಕೆ ಆಗಬೇಕು ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನಾದರೂ ಈ ರಾಷ್ಟ್ರೀಯ ಪಕ್ಷಗಳು ಒಳ ಒಪ್ಪಂದ ಆರೋಪಕ್ಕೆ ಫುಲ್‌ಸ್ಟಾಪ್ ಇಡಬೇಕು. ಇವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡುವುದೇ ನಿತ್ಯ ಕಾಯಕವಾಗಿದೆ. ಎರಡೂ ಪಕ್ಷಗಳ ಭೀತಿ ಎಷ್ಟಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು ಕುಮಾರಸ್ವಾಮಿ ಅವರು.

ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಹೇಳುತಾರೆ, ಹೈದರಾಬಾದ್ ನಲ್ಲಿ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಆಗಿದೆ ಎಂದು. ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳ್ತಾರೆ, ಬಿಜೆಪಿ ಜತೆ ಜೆಡಿಎಸ್ ಒಳ ಒಪ್ಪಂದ ಆಗಿದೆ ಎಂದು. ಈ ಇಬ್ಬರಿಗೆ ಇದು ಬಿಟ್ಟು ಬೇರೆ ವಿಚಾರವೇ ಇಲ್ಲವೇ? ವಿಷಯ ಇಲ್ಲ ಅಂದರೆ, ಬೇಕಾದರೆ ಮಾತನಾಡಲು ನಾನೇ ವಿಷಯ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿಗಳು.

ಕಾಂಗ್ರೆಸ್, ಬಿಜೆಪಿಗೆ ಅಧಿಕಾರಕ್ಕೆ ಬರುವ ಯಾವ ಸ್ಪಷ್ಟ ಭರವಸೆಯೂ ಇಲ್ಲ. ಎರಡೂ ಪಕ್ಷಗಳಿಗೆ ಆತಂಕ ಶುರುವಾಗಿದೆ.

ಜೆಡಿಎಸ್‌ನವರು ಎಲ್ಲಿ ಬಿಜೆಪಿ ಜತೆ ಹೋಗ್ತಾರೆ ಅಂತ ಕಾಂಗ್ರೆಸ್‌ನವರಿಗೆ, ಕಾಂಗ್ರೆಸ್ ಜತೆ ಎಲ್ಲಿ ಹೋಗ್ತಾರೆ ಅಂತ ಬಿಜೆಪಿಯವರಿಗೆ ಭಯವಿದೆ. ಹೀಗಾಗಿ ಪದೇಪದೆ ನಮ್ಮನ್ನು ಕೆಣಕುತ್ತಿದ್ದಾರೆ. ನಾನು ಈ ಬಾರಿ 123 ಕ್ಷೇತ್ರಗಳನ್ನು ಗುರಿ ಇಟ್ಟುಕೊಂಡು ಹೊರಟಿದ್ದೇವೆ. ಅದನ್ನು ಸಹಿಸುವುದು ಎರಡೂ ಪಕ್ಷಗಳಿಗೆ ಆಗುತ್ತಿಲ್ಲ. ಹೊಟ್ಟೆಕಿಚ್ಚಿನಿಂದ ಹೀಗೆ ಮಾತನಾಡುತ್ತವೆ ಎಂದು ಕಿಡಿಕಾರಿದರು ಕುಮಾರಸ್ವಾಮಿ ಅವರು.

ಈಗಾಗಲೇ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹಳ್ಳಿ ಹಳ್ಳಿಗೆ ತಲುಪಿದ್ದೇನೆ. ಜನತಾ ಪರ್ವ, ಜನತಾ ಸಂಗಮ, ಜನತಾ ಜಲಧಾರೆ, ಜನತಾಮಿತ್ರ, ಪಂಚರತ್ನ ಸಮಾರೋಪ ಸಮಾವೇಶಗಳು ಯಶಸ್ವಿಯಾಗಿವೆ. ಆ ಸಮಾವೇಶಗಳನ್ನು ನೋಡಿ ರಾಷ್ಟ್ರೀಯ ಪಕ್ಷಗಳು ಭಯಭೀತವಾಗಿವೆ ಎಂದು ಅವರು ಹೇಳಿದರು.

ನಿನ್ನೆ ನೋಡಿದೆ, ನಾಲ್ಕೈದು ಸಮೀಕ್ಷೆ ವರದಿಗಳು ಬಂದಿವೆ. ನನಗೆ ಆ ಸಮೀಕ್ಷೆಗಳ ಬಗ್ಗೆ ಆತಂಕವಿಲ್ಲ. ಅದೇ ಸಿ ವೋಟರ್ ಹಿಂದೆ ಕಾಂಗ್ರೆಸ್ 120 ಅಂತ ಭವಿಷ್ಯ ಹೇಳಿತ್ತು, ಕಾಂಗ್ರೆಸ್ ಎಷ್ಟು ಸೀಟುಗಳಲ್ಲಿ ಗೆದ್ದಿತ್ತು? ಎಂದು ಪ್ರಶ್ನಿಸಿದ ಅವರು, ರಾಷ್ಟ್ರೀಯ ಪಕ್ಷಗಳು ತಮ್ಮ ಕಾರ್ಯತಂತ್ರದ ಭಾಗವಾಗಿ ಯಾವುದೋ ಕಂಪನಿ ಹೆಸರಾಕಿ ಸರ್ವೆ ರಿಪೋರ್ಟ್ ಅಂತ ಬಿಡುಗಡೆ ಮಾಡುತ್ತಿವೆ. ನಾನು ಕೂಡ ನಾಳೆ ದುಡ್ಡು ಕೊಟ್ಟು ಈ ರೀತಿ ಮಾಡಿ ಅಂತ ಹೇಳಬಹದು. ಅಂತ ಅಗತ್ಯ ನನಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಅವರು ನೇರ ಮಾತುಗಳಲ್ಲಿ ಹೇಳಿದರು.

ಪದೇ ಪದೇ ಒಳ ಒಪ್ಪಂದ ಅಂತ ಹೇಳಿಕೆ ನೀಡಿ ಹಾಸ್ಯಾಸ್ಪದಕ್ಕೆ ಒಳಗಾಗಬೇಡಿ ಎಂದು ಕಾಂಗ್ರೆಸ್ ಬಿಜೆಪಿ ಪಕ್ಷಗಳಿಗೆ ಹೇಳಲು ಬಯಸುತ್ತೇನೆ. ನಾನೇನು ಸುಳ್ಳು ಹೇಳೋನಲ್ಲ, ಕೆಲವರು ನನ್ನನ್ನು ಸಂಪರ್ಕ ಮಾಡಿದ್ದಾರೆ. ಎರಡೂ ಪಕ್ಷಗಳಲ್ಲಿ ಹೇಗಪ್ಪ ಜೆಡಿಎಸ್‌ ಪಕ್ಷವನ್ನು ವಿಶ್ವಾಸಕ್ಕೆ ಪಡೆಯೋದು ಅಂತ ಸ್ಪರ್ಧೆ ಶುರುವಾಗಿದೆ. ನಾನೇನು ಸುಖಾಸುಮ್ಮನೆ ಹೇಳುತ್ತಿಲ್ಲ ಎಂದು ಖಡಕ್ಕಾಗಿ ಹೇಳಿದರು ಅವರು.

ನಮ್ಮ ಪಕ್ಷದ ಬಗ್ಗೆ ಹೊರಗೆ ಸಣ್ಣತನದ ಹೇಳಿಕೆ ನೀಡುತ್ತಾ ಅವರೇ ಸಣ್ಣವರಾಗ್ತಾ ಇದ್ದಾರೆ. ಜನರಿಗೆ ಇವರ ಯೋಗ್ಯತೆ ಅರ್ಥ ಆಗಿದೆ. ಸತ್ಯ ಗೊತ್ತಿದ್ದೇ ಅವರು ಸುಳ್ಳಿನ ಕಥೆ ಕಟ್ಟುತ್ತಿದ್ದಾರೆ. ಹದಿನೈದು ವರ್ಷದಿಂದ ಇವರ ಹಣೆಬರಹ ನೋಡಿ ಸಾಕಾಗಿದೆ ಎಂದರು ಕುಮಾರಸ್ವಾಮಿ ಅವರು.

ಮುಂದೆ ಬಿಜೆಪಿ, ಕಾಂಗ್ರೆಸ್ ಮೈತ್ರಿ ಆದರೂ ಅಚ್ಚರಿ ಇಲ್ಲ. ಈ ಬಗ್ಗೆ ಯಾವುದೇ ಸಂಶಯವೇ ಬೇಡ. ನನ್ನ ಮೈತ್ರಿ ಸರಕಾರ ತೆಗೆಯಲು ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವ ಹಣ ಕೊಟ್ಟ ವ್ಯಕ್ತಿಗೆ ಮದ್ದೂರುನಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲು ಮುಂದಾಗಿದೆ. ಅದೇ ವ್ಯಕ್ತಿಯ ಬಿಜೆಪಿ ಜತೆಗಿನ ಸಂಬಂಧ ಎಂತದ್ದು? ಆತ ಶ್ರೀಲಂಕಾಕ್ಕೆ ಏಕೆ ಓಡಿ ಹೋಗಿದ್ದ? ಎಂದು ಕುಟುಕಿದರು ಕುಮಾರಸ್ವಾಮಿ ಅವರು.

ಸಚಿವ ನಾರಾಯಣಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಹೊರಟಿದ್ದಾರೆ ಏಕೆ? ಅದರ ಹಿಂದಿನ ಹಕೀಕತ್ತು ಏನು? ಎಲ್ಲವೂ ಜನರಿಗೆ ಗೊತ್ತಿದೆ. ಹೀಗಾಗಿ ಯಾವುದೇ ಅನುಮಾನ ಬೇಡ, ಕಾಂಗ್ರೆಸ್ – ಬಿಜೆಪಿ‌ ಮೈತ್ರಿ ಒಳ ಒಪ್ಪಂದ ಅದೆಷ್ಟು ಆಳವಾಗಿದೆ ಎಂಬುದನ್ನು ಇದರಿಂದ ತಿಳಿಯಬಹುದು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್‌ನಲ್ಲಿ ಅಪ್ಪ ಮಕ್ಕಳ ಮಾತನ್ನು ಕೇಳದಿದ್ದರೆ ಪಕ್ಷದಿಂದ ಹೊರ ಹಾಕುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ; ಸಿದ್ದರಾಮಯ್ಯ ಅವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಾವು ಸ್ಟೇಜ್ ಹಾಕಬೇಕಿತ್ತು, ಜನ ಸೇರಿಸಬೇಕಿತ್ತು. ಇವರು ಬಂದು ಕಾಲುಮೇಲೆ ಕಾಲು ಹಾಕಿಕೊಂಡು, ಅದೇ ಚಪ್ಪಲಿ ಕಾಲಿನಿಂದ ದೇವೆಗೌಡರನ್ನು ಇದ್ದುಕೊಂಡು ಕೂರುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವತ್ತು ದೇವೆಗೌಡರು‌ ತಮ್ಮ ಮಕ್ಕಳನ್ನು ಮುಂದೆ ನಿಲ್ಲಿಸಿಕೊಂಡಿದ್ದರು. ಸಿದ್ದರಾಮಯ್ಯ ಈ ಪಕ್ಷದಲ್ಲಿ ಪಾಳೆಗಾರಿಕೆ ಮಾಡ್ತಾ ದೇವೆಗೌಡರನ್ನು ಹೆದರಿಸಿಟ್ಟುಕೊಂಡಿದ್ದರು. ಹಿಂದೆ ಬ್ಯಾನರ್‌ನಲ್ಲಿ ಭಾವಚಿತ್ರ ಇಲ್ಲ ಅಂತ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಈ ಮಹಾಶಯ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಿ ಎರಡು ಸೀಟು ತರಲಿ ನೋಡೋಣ ಎಂದು ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಜೆಡಿಎಸ್ ಬೆಳೆಸದಿದ್ದಾರೆ ನಿಮ್ಮನ್ನು ಕಾಂಗ್ರೆಸ್‌ನವರು ಎಲ್ಲಿ ಕರೆಯುತ್ತಿದ್ದರು. ಮೂಸಿಯೂ ನೋಡುತ್ತಿರಲಿಲ್ಲ. ಮೈಸೂರಲ್ಲಿ ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಮತ್ತೆ ಎಷ್ಟು ಗೆಲ್ಲಿಸಿಕೊಂಡರು. ಹೋಗಲಿ ಅವರು ಗೆದ್ದಿದ್ದು ಎಷ್ಟು ವೋಟಿನಿಂದ? ಕೇವಲ 200 ವೋಟಿನಿಂದ ಗೆದ್ದು ಮುಖ ಉಳಿಸಿಕೊಂಡರು. ಅವರಿಗೆ ಜನತೆಯ ಮೂಲಕ ಉತ್ತರ ಕೊಡಿಸುತ್ತೇನೆ ಎಂದು ಕಿಡಿಕಾರಿದರು ಕುಮಾರಸ್ವಾಮಿ ಅವರು.

ಇದೇ ಸಿದ್ದರಾಮಯ್ಯ ಹಿಂದೆ ಇಕ್ಬಾಲ್ ಅನ್ಸಾರಿ ಅವರನ್ನು ಮಂತ್ರಿ ಮಾಡಬೇಡಿ‌ ಅಂತ ಗಲಾಟೆ ಮಾಡಿದ್ದರು. ಸಭೆಯಿಂದ ಟವೆಲ್ ಕೊಡವಿಕೊಂಡು ಎದ್ದು ಹೋಗಿದ್ದರು. ಎಂಎಲ್‌ಸಿ‌ ಮಾಡಿದ್ದೆ ಹೆಚ್ಚು, ಯಾಕೆ ಮಂತ್ರಿ ಮಾಡ್ತೀರ ಅಂತ ರಚ್ಚೆ ಮಾಡಿದ್ದರು. ಅಂಥ ವ್ಯಕ್ತಿ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಚುನಾವಣೆ ಆಯೋಗಕ್ಕೆ ಮಾಜಿ ಸಿಎಂ ಸಲಹೆ:

ಚುನಾವಣಾ ನೀತಿ ಸಂಹಿತೆಯನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೇಲೆ ಹೇರಬೇಡಿ ಎಂದು ಕುಮಾರಸ್ವಾಮಿ ಅವರು ಚುನಾವಣೆ ಆಯೋಗಕ್ಕೆ ಸಲಹೆ ಮಾಡಿದರು.

ಬಡವರ ಚಿಕಿತ್ಸೆಗೆ ನೆರವಾಗಲು ಸಿಎಂ ಪರಿಹಾರ ನಿಧಿ ಬಳಕೆಗೆ ಅವಕಾಶ ನೀಡಿ. ನೀತಿ ಸಂಹಿತೆ ಹೆಸರಲ್ಲಿ ಬಡವರ ಜೀವ ತೆಗೆಯೋದು ಬೇಡ. ಇವತ್ತು ಹತ್ತು ಇಪ್ಪತ್ತು ಲಕ್ಷ ಹಣ ಕಟ್ಟಲು ಸಾಧ್ಯವಾಗದೆ ನಿತ್ಯ ಜನ ಮನೆ ಮುಂದೆ ಬರ್ತಾರೆ. ಅವರಿಗೆ ನೆರವಾಗಲು ಅವಕಾಶ ಮಾಡಿಕೊಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಪಕ್ಷಕ್ಕೆ ಸೇರ್ಪಡೆ:

ಇದಕ್ಕೂ ಮುನ್ನ ಕಂಪ್ಲಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಭಾವೀ ಮುಖಂಡ ರಾಜೂ ನಾಯ್ಕ್ ಅವರು ತಮ್ಮ ಐದುನೂರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಕೆ ಎನ್ ತಿಪ್ಪೇಸ್ವಾಮಿ ಮುಂತಾದವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ನಂದಿನಿ ಮೊಸರು ಮೇಲೆ ದಹಿ ಹಿಂದಿ ಪದ ಮುದ್ರಣ ನಿಲ್ಲಿಸಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸುವುದನ್ನು ಕೆಎಂಎಫ್ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ನಂದಿನಿಯನ್ನು ಬ್ರಾಂಡ್ ಅನ್ನು ಹಳ್ಳ ಹಿಡಿಸಲು ವ್ಯವಸ್ಥಿತ ಸಂಚು ಹೂಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ನಂದಿನಿಯು ಅಮುಲ್ ಅಡಿಯಾಳು ಅಲ್ಲ, ಕರ್ನಾಟಕವು ಗುಜರಾತಿನ ವಸಾಹತು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರ ಟ್ವೀಟ್ ನ ಪೂರ್ಣ ಪಾಠ ಇಲ್ಲಿದೆ.

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ.

ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ. ಇದು ಗೊತ್ತಿದ್ದರೂ ಹಿಂದಿ ಹೇರಿಕೆಯ ಅಹಂ ತೋರಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದ ಸಭೆಯೊಂದರಲ್ಲಿ, ಗುಜರಾತಿನ ಅಮುಲ್ ಜತೆ ನಂದಿನಿಯನ್ನು ವಿಲೀನ ಮಾಡುವುದಾಗಿ ಹೇಳಿದ್ದರು. ಹಿಂದಿ ಪದ ಮುದ್ರಣ ನಂದಿನಿ ಹೈಜಾಕಿನ ಅರಂಭವಾ?

ಶಾ ಅವರ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದರು. ನಾನೂ ವಿರೋಧಿಸಿದ್ದೆ. ಆಮೇಲೆ ಸುಮ್ಮನಾಗಿದ್ದ ಕೇಂದ್ರ ಬಿಜೆಪಿ ಸರಕಾರ, ಈಗ ಆಹಾರ ಸುರಕ್ಷತಾ ಪ್ರಾಧಿಕಾರದ ಮೂಲಕ ಹಿಂಬಾಗಿಲಿನಿಂದ ಮೊಸರಿನ ಪಕ್ಕ ದಹಿ ಸೇರಿಸಿ ಕನ್ನಡಿಗರ ಸ್ವಾಭಿಮಾನಕ್ಕೆ ಸಡ್ಡು ಹೊಡೆದಿದೆ. ಇದು ಕನ್ನಡಿಗರ ಮೇಲೆ ಬಿಜೆಪಿಯ ದಮ್ಮು ತಾಕತ್ತಿನ ಪ್ರದರ್ಶನವೇ?

ಕನ್ನಡಕ್ಕೆ ಕೊಕ್ಕೆ ಹಾಕಿ ಹಿಂದಿಯನ್ನು ಮೆಲ್ಲಗೆ ಹೇರಿ ಇಡೀ ನಂದಿನಿ ಪದಾರ್ಥಗಳನ್ನು ಹಳ್ಳ ಹಿಡಿಸುವುದು ಇದರ ಹಿಂದಿರುವ ಘೋರ ಷಡ್ಯಂತ್ರ. ಆಮೇಲೆ, ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿಲ್ಲ ಎಂದು ಕಥೆ ಕಟ್ಟಿ, ಅದನ್ನು ಉಳಿಸುವ ನಾಟಕವಾಡಿ ನಂದಿನಿಯನ್ನು ಸಲೀಸಾಗಿ ಅಮುಲ್ ಜತೆಗೆ ವಿಲೀನ ಮಾಡುವ ಹುನ್ನಾರವಷ್ಟೇ ಇದು.

ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿದ್ದೇವೆ ಎಂದರೆ ಇಷ್ಟ ಬಂದಹಾಗೆ ಒಳ ನುಸುಳುವುದಲ್ಲ, ಸೌಮ್ಯವಾಗಿದ್ದೇವೆ ಎಂದರೆ ಸುಮ್ಮನಿದ್ದೇವೆ ಎಂದಲ್ಲ. ನಂದಿನಿ ಕನ್ನಡಿಗರ ಸ್ವಾಭಿಮಾನವೇ ಹೊರತು ಅಮುಲ್ ಅಡಿಯಾಳಲ್ಲ. ಕರ್ನಾಟಕ ಭಾರತ ಗಣರಾಜ್ಯದ ಒಂದು ಭಾಗವೇ ಹೊರತು ಗುಜರಾತಿನ ವಸಾಹತುವಲ್ಲ.

ಈಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಬ್ಬರೂ ಕರ್ನಾಟಕಕ್ಕೆ ಬಲು ಬಿಡುವಾಗಿ ಬಂದರು ಎಂದರೆ, ಕೇವಲ ಚುನಾವಣೆ ಉದ್ದೇಶಕ್ಕೇ ಎಂದುಕೊಂಡಿದ್ದೆ. ಆದರೆ, ಕರ್ನಾಟಕದಲ್ಲಿ ನಡೆದ ಅವರಿಬ್ಬರ ಶೋಗಳ ಸವಾರಿ ನಮ್ಮ ನಂದಿನಿಯ ಹೆಸರಿಗೇ ಕುತ್ತು ತರುತ್ತದೆ ಎಂದು ಭಾವಿಸಿರಲಿಲ್ಲ.

ಆರೂವರೆ ಕೋಟಿ ಕನ್ನಡಿಗರ ಮನೋಭಾವಕ್ಕೆ ವಿರುದ್ಧವಾಗಿ ದಹಿ ಎನ್ನುವ ಪದವನ್ನು ಮುದ್ರಿಸಿದ್ದೇ ಕೆಎಂಎಫ್ ಮಾಡಿರುವ ದೊಡ್ದ ತಪ್ಪು. ಇದು ರಾಜ್ಯ ಬಿಜೆಪಿ ಸರಕಾರದ ಗಮನಕ್ಕೆ ಬಾರದೆ ಆಗಿರುವ ಕೃತ್ಯವಲ್ಲ. ಕಾಣದ ಕೈಗಳ ಕಳ್ಳಾಟ ಇಲ್ಲಿ ಸ್ಪಷ್ಟ. ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ರಾಜ್ಯ ಬಿಜೆಪಿ ಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು.

ಯಶವಂತಪುರದಲ್ಲಿ ಪಂಚರತ್ನ ರಥಯಾತ್ರೆ ನಡೆಯುವ ವೇಳೆ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ‘ ನಂದಿನಿ ಉಳಿಸಿ ‘ ಎಂದು ಮೊಸರು, ಹಾಲಿನ ಹಾರ ಹಾಕಿ ನನ್ನ ಗಮನ ಸೆಳೆದಿದ್ದರು. ನಂದಿನಿಗೆ ಕುಣಿಕೆ ಬಿಗಿಯುವ ಯಾವುದೇ ದುಷ್ಕೃತ್ಯ ಸಹಿಸುವ ಪ್ರಶ್ನೆಯೇ ಇಲ್ಲ ಎಂದಿರುವ ಅವರು ನಂದಿನಿ ನಮ್ಮದು, ಕೆಎಂಎಫ್ ಕನ್ನಡಿಗರದ್ದು ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ಜೆಡಿಎಸ್ ಜಾತಿಗೆಟ್ಟಿದೆ ಎಂದ ಕಾಂಗ್ರೆಸ್ ಗೆ ಚಾಟಿ ಬೀಸಿದ ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಪಕ್ಷ ಜಾತಿಗೆಟ್ಟಿದೆ ಎಂದು ಕೀಳು ಅಭಿರುಚಿಯ ಟೀಕೆ ಮಾಡಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಕಾಂಗ್ರೆಸ್ ಪಕ್ಷವನ್ನು ಕಾಮಾಲೆ ಕಾಂಗ್ರೆಸ್ ಎಂದು ಮೂದಲಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್ ಕುಟಿಲತೆ, ಕಪಟತನದ ಕಾಮಾಲೆ ಕಾಯಿಲೆಯಿಂದ ಬಳಲುತ್ತಿದೆ. ಕೈ ಕೊಡುವ ಚಾಳಿ ಕಾಂಗ್ರೆಸ್ ಪಕ್ಷದ ಜನ್ಮಕ್ಕೆ ಅಂಟಿದ ಆಜನ್ಮ ಜಾಡ್ಯ. ಒಳಗೊಂದು ಮುಖ, ಹೊರಗೊಂದು ಮುಖವುಳ್ಳ ಮುಖೇಡಿ ಪಕ್ಷವೇ ಕಾಂಗ್ರೆಸ್. ಅಂಥ ಕಾಂಗ್ರೆಸ್, ಚುನಾವಣೆ ಹೊತ್ತಿಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತ್ತಿದೆ ಎಂದು ದೂರಿದ್ದಾರೆ.

ಪ್ರಧಾನಿಯಾಗಿದ್ದ ಕನ್ನಡದ ಹೆಮ್ಮೆಯ ಪುತ್ರನನ್ನು ಕೆಳಗೆಳೆದ ಕಿರಾತಕ ಪಕ್ಷ, ಜಾತ್ಯತೀತತೆ ಎನ್ನುತ್ತಲೇ ಜಾತಿಗಳ ನಡುವೆ ಕಿಚ್ಚಿಟ್ಟ ಸೋಗಲಾಡಿ ಪಕ್ಷ, ಅಹಿಂದ ಎನ್ನುತ್ತಲೇ ಬಿಜೆಪಿ ಹಿಂದೆಬಿದ್ದು ಬೇಳೆ ಬೇಯಿಸಿಕೊಳ್ಳುತ್ತಿರುವ ಪಕ್ಷ; ಅಂಥ ಕಳಂಕಿತ ಪಕ್ಷ ಜಾತ್ಯತೀತ ಜನತಾದಳದ ಜಾತ್ಯತೀತತೆ ಬಗ್ಗೆ ಕೀರಲು ದನಿಯಲ್ಲಿ ಕಿರುಚುತ್ತಿದೆ. ಇಡೀ ದೇಶದ ಉದ್ದಗಲಕ್ಕೂ ಜಾತ್ಯತೀತ ಪಕ್ಷಗಳ ಮಾರಣಹೋಮ ನಡೆಸಿ, ಈಗ ಅಳಿವು ಉಳಿವಿಗಾಗಿ ಅದೇ ಪ್ರಾದೇಶಿಕ ಪಕ್ಷಗಳ ಬಾಲವಾಗಿ ಉಸಿರಾಡುತ್ತಿದೆ ಕಾಂಗ್ರೆಸ್. ಇನ್ನೂ ಹಳೆಯ ಅಮಲಿನಲ್ಲಿಯೇ ತೇಲುತ್ತಿದೆ ಆ ಪಕ್ಷಕ್ಕೆ ವರ್ತಮಾನದ ವರ್ತನೆಯ ಅರಿವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ.

ಈ ಕಾಂಗ್ರೆಸ್ ಮಹಾತ್ಮ ಗಾಂಧೀಜಿ ಅವರ ಕಾಲದ ಕಾಂಗ್ರೆಸ್ ಅಲ್ಲ, ಅಧಿಕಾರಕ್ಕಾಗಿ ಎಲ್ಲ ಅಡ್ಡದಾರಿ ಹಿಡಿದ ಪಕ್ಷ ಈ ಕಾಂಗ್ರೆಸ್, ಕಾಲಚಕ್ರಕ್ಕೆ ಸಿಲುಕಿ ಕೊರಗುತ್ತಾ ನೀತಿಗೆಟ್ಟ, ಲಜ್ಜೆಗೆಟ್ಟ, ಮತಿಗೆಟ್ಟ ಕಾಂಗ್ರೆಸ್, ಕರ್ನಾಟಕದಲ್ಲಿ ಮತಗೇಡಿ ಬಿಜೆಪಿಯ ಬಾಲಂಗೋಚಿ ಆಗಿರುವುದು ಸುಳ್ಳಾ? ಎಂದು ಪ್ರಶ್ನಿಸಿದ್ದಾರೆ.

ಸರಕಾರಗಳ ಸುಪಾರಿ ಕಿಲ್ಲರ್ ಅವರನ್ನೇ ಪೋಷಿಸಿ ಪೊರೆಯುತ್ತಿರುವ, ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡುವ ಕೀಳುತನ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಅಂಟಿದ ಬಾಲಗ್ರಹ ಪೀಡೆ. ಅಧಿಕೃತ ಪ್ರತಿಪಕ್ಷವಾಗಿ ಹಗರಣಗಳ ಆಡಂಬೋಲವಾದ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಯಕಶ್ಚಿತ್ ಒಂದು ದಾಖಲೆಯನ್ನೂ ಬಿಡುಗಡೆ ಮಾಡಲು ಯೋಗ್ಯತೆ ಇಲ್ಲದ ಪಕ್ಷ ಕಾಂಗ್ರೆಸ್ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಭ್ರಷ್ಟ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಸರಣಿ ದಾಖಲೆಗಳನ್ನೇ ಇಟ್ಟ ಜೆಡಿಎಸ್, ಬಿಜೆಪಿ ಅಧಿಕಾರಸ್ಥರ ಸರಣಿಜೈಲು ಪರೇಡ್ ಗೆ ಕಾರಣವಾಗಿದ್ದು ಇತಿಹಾಸ. ಆಗ ಕಾಂಗ್ರೆಸ್ ಎಲ್ಲಿತ್ತು? ಅಂದು ಬಿಜೆಪಿ ಜತೆ ಅಡ್ಜಸ್ಟ್ ಆಗಿದ್ದು ಸುಳ್ಳೇ? ಕದ್ದು, ಕಣ್ಮುಚ್ಚಿ ಹಾಲು ಕುಡಿದರೆ ಗೊತ್ತಾಗುವುದಿಲ್ಲವೇ? ಕಳ್ಳಬೆಕ್ಕಿನ ಕಥೆ ಬೇರೆ ಬಿಡಿಸಿ ಹೇಳಬೇಕೆ? ಎಂದು ಟಾಂಗ್ ಕೊಟ್ಟಿರುವ ಅವರು; ಜಗತ್ತಿಗೆ ಮಾದರಿಯಾದ ಭಾರತದ ಪ್ರಜಾಪ್ರಭುತ್ವಕ್ಕೆ ಶಾಶ್ವತ ಕಳಂಕ ಮೆತ್ತಿದ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಮಹೋನ್ನತ ಆಶಯಕ್ಕೆ ಕುಣಿಕೆ ಬಿಗಿದ ಆಪರೇಶನ್ ಕಮಲ ಎಂಬ ಬಿಜೆಪಿಯ ಅಸಹ್ಯದಲ್ಲಿ ಅಭ್ಯಂಜನ ಮಾಡಿದವರು ಯಾರಯ್ಯ? ಎಂದು ಕೇಳಿದ್ದಾರೆ.

2018ರಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರಕಾರದ ಹತ್ಯೆಗೆ ಸುಪಾರಿ ಸ್ವೀಕರಿಸಿದ ‘ಸುಪಾರಿ ಸಿದ್ದಪುರುಷರು’ ಯಾವ ಪಕ್ಷದವರು? ಕಲಾಪದಲ್ಲಿ ವೀರಾವೇಶ, ಕಲಾಪದಿಂದ ಕಾಲು ಹೊರಗಿಟ್ಟ ತಕ್ಷಣ ಅದು ಸಶೇಷ!! ಇದಲ್ಲವೇ ಸ್ವಯಂ ಘೋಷಿತ ಸೆಕ್ಯೂಲರ್ ಪಕ್ಷದ ಭೂಷಣ? ಸತ್ಯವನ್ನೇ ಕೊಲ್ಲುವ ಹುಂಬತನ ಏಕೆ? 2008ರ ಆಪರೇಷನ್ ಕಮಲದ ಉಪ ಚುನಾವಣೆ. ಕಾಂಗ್ರೆಸ್ ಅನ್ನು ಹಳ್ಳ ಹಿಡಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷ ಸ್ಥಾನದಿಂದ ಹೊರದಬ್ಬಲು ಯಡಿಯೂರಪ್ಪ ಅವರ ಜತೆ ನೇರ ಡೀಲಿಗಿಳಿದು ಕೋಟಿ ಕೋಟಿ ಸುಪಾರಿ ಪಡೆದು ಇಡಗಂಟು ಮಾಡಿಕೊಂಡವರ ಬಗ್ಗೆ ಕಾಂಗ್ರೆಸ್ ಅಸಹನೀಯ ಮೌನವೇಕೆ? ಆಗ ಎಲ್ಲಿತ್ತು ಜಾತ್ಯತೀತತೆ? ಆ ದಲಿತ ನಾಯಕ ಮಾಡಿದ ಅನ್ಯಾಯವೇನು? ಎಂದು ಪ್ರಶ್ನಿಸಿದ್ದಾರೆ.

ಧರ್ಮ, ಜಾತಿಗಳ ನಡುವೆ ವೈಷಮ್ಯದ ವಿಷಬೀಜ ಬಿತ್ತಿದ, ಹಗರಣಗಳಲ್ಲಿ ಮುಳುಗೇಳುತ್ತಿರುವ ಕಡುಕೆಟ್ಟ ಭ್ರಷ್ಟ ಈ ರಾಜ್ಯ ಬಿಜೆಪಿ ಸರಕಾರ ಬರಲು ಕಾರಣರು ಯಾರಯ್ಯ? ಮೇಲೆ ಮಾತ್ರ ಜಾತ್ಯತೀತ, ಒಳಗೆ ಮಾತ್ರ ಎಲ್ಲಕ್ಕೂ ಅತೀತ! ಇದು ಯಾವ ಸೀಮೆಯ ತತ್ತ್ವ ಸಿದ್ದಾಂತ? ಇನ್ನೆಷ್ಟು ದಿನ ಈ ಟೋಪಿ ರಾಜಕಾರಣ? ರಾಜಕೀಯದಲ್ಲಿ ಕಳ್ಳ ಸಂಸಾರ ಎನ್ನುವುದು ಕಾಂಗ್ರೆಸ್ ಪಕ್ಷದ ಆವಿಷ್ಕಾರ. ಅಷ್ಟೇ ಅಲ್ಲ, ಇನ್ನೊಬ್ಬರ ಕಳ್ಳ ಸಂಸಾರಕ್ಕೆ ಕೀಲಿ ಕೊಟ್ಟು ಮನೆಮುರುಕ ಕೆಲಸ ಮಾಡುವುದೂ ಕಾಂಗ್ರೆಸ್ ಖಯಾಲಿ. ಕರ್ನಾಟಕದಲ್ಲಿ ಬಿಜೆಪಿ- ಕಾಂಗ್ರೆಸ್ ಭಾಯಿ ಭಾಯಿ; ಇದೇ ಸತ್ಯ. ಅಲ್ಲ ಎನ್ನುವ ಅಚಲ ನೈತಿಕತೆ ಆ ಪಕ್ಷಕ್ಕೆ ಇದೆಯಾ? ಎಂದು ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು