ಬೆಂಗಳೂರು : ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಹಿಜಾಬ್ ವಿವಾದ ಸೃಷ್ಟಿಸಲಾಗಿದೆ,ಇವತ್ತು ಹಿಜಾಬ್ ಬೇಡಿಕೆ ಇಡುತ್ತಾರೆ, ನಾಳೆ ಇನ್ನೊಂದು ಬೇಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಯಾವುದೇ ರೀತಿಯ ಧಾರ್ಮಿಕ ಸೂಚಿತ ಬಟ್ಟೆಗಳನ್ನು ಹಾಕಬಾರದು ಎಂದು ಹೇಳಿದ ಮೇಲೂ ಈ ರೀತಿಯ ಮನಸ್ಥಿತಿ ಬಹಳ ಅಪಾಯಕಾರಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಇದನ್ನು ರಾಜಕೀಯ ಲಾಭಕ್ಕಾಗಿ ಮತ ಬ್ಯಾಂಕ್ ಗಾಗಿ ಮಾಡುತ್ತ ಬಂದಿದೆ. ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರಲು ಅವಕಾಶ ನೀಡಿದರೆ ನಾಳೆ ದಿಗಂಬರ ಅನುಯಾಯಿಗಳು, ನಾಗಾ ಸಾಧು ಅನುಯಾಯಿಗಳು ತಮ್ಮ ಹುಟ್ಟುಡುಗೆಯಲ್ಲಿ ಶಾಲೆಗೆ ಬರುತ್ತೇವೆ ಎಂದರೆ ಪರಿಸ್ಥಿತಿ ಏನಾಗುತ್ತದೆ ಯೋಚನೆ ಮಾಡಿ ಎಂದರು.