News Karnataka Kannada
Monday, May 06 2024
ಬೆಂಗಳೂರು ನಗರ

ಗಗನಕ್ಕೇರುತ್ತಿರುವ ಬೆಲೆಯಲ್ಲಿ  ಬಂಗಾರ ಖರೀದಿ ಹೇಗೆ?

New Project 2021 12 20t113854.644
Photo Credit :

ಮದುವೆ ನಿಶ್ಚಯದಿಂದ ಆರಂಭವಾಗಿ ವಿವಾಹದ ತನಕ ಚಿನ್ನಾಭರಣಗಳು ಬೇಕೇ ಬೇಕು. ಜತೆಗೆ ಇವತ್ತಿನ ದಿನಗಳಲ್ಲಿ ತಾವು ಖರೀದಿಸುವ ಬಂಗಾರದಿಂದಲೇ ತಮ್ಮ ಅಂತಸ್ತನ್ನು ತೋರ್ಪಡಿಸಿಕೊಳ್ಳುವ ಛಾಳಿ ಶುರುವಾಗಿರುವುದರಿಂದ, ಅಷ್ಟೇ ಅಲ್ಲದೆ ಮಗಳಿಗೆ ಎಷ್ಟು ಬಂಗಾರ ಹಾಕ್ತೀರಾ ಎಂಬ ಕಾತರದ, ಕುಹಕದ ಪ್ರಶ್ನೆಗಳಿಗೆ ಉತ್ತರ ನೀಡುವ ಸಲುವಾಗಿಯೇ ಬಡವರು ಸಾಲ ಮಾಡಿಯಾದ್ರು ಚಿನ್ನಾಭರಣದಂಗಡಿಯತ್ತ ಹೆಜ್ಜೆ ಹಾಕಲೇ ಬೇಕಾಗಿದೆ.

ಗಗನಕ್ಕೇರುತ್ತಿರುವ ಬೆಲೆಯ ನಡುವೆ ಚಿನ್ನ ಖರೀದಿ ಮಾಡುವ ಗ್ರಾಹಕರ ಕಣ್ಣಂಚಿನಲ್ಲೀಗ ನೀರು ಜಿನುಗುತ್ತಿದೆ. ನಿತ್ಯದ ಬದುಕಿಗೆ ಚಿನ್ನ ಅನಿವಾರ್ಯ ಅಲ್ಲದಿರಬಹುದು. ಆದರೆ ಮಗಳನ್ನು ಮದುವೆ ಮಾಡಿಕೊಡುವ ವೇಳೆ ಹೆಣ್ಣುಹೆತ್ತವರು ಅನಿವಾರ್ಯವಾಗಿ ಚಿನ್ನಾಭರಣಗಳನ್ನು ನೀಡಲೇ ಬೇಕಾಗಿರುವುದರಿಂದ ಸಾಲ ಮಾಡಿಯಾದರೂ ಚಿನ್ನ ಖರೀದಿಸಲೇ ಬೇಕಾಗಿದೆ.

ಇವತ್ತು ನಿಮ್ಮ ಮಗಳಿಗೆ ಎಷ್ಟು ಗ್ರಾಂನ ಚಿನ್ನದ ಒಡವೆಗಳನ್ನು ಹಾಕ್ತೀರಾ? ಎಂಬ ಪ್ರಶ್ನೆಯಿಂದಲೇ ಮದುವೆ ಮಾತುಕತೆಗಳು ಶುರುವಾಗುವುದರಿಂದಾಗಿ ಕಷ್ಟನೋ ಸುಖನೋ? ಬೆಲೆ ಕಡಿಮೆ ಇರಲಿ, ಹೆಚ್ಚಿರಲಿ ಚಿನ್ನಾಭರಣದ ಅಂಗಡಿಗೆ ಹೆಜ್ಜೆ ಹಾಕಲೇ ಬೇಕಾಗಿದೆ. ಹೀಗಾಗಿ ಚಿನ್ನದ ವ್ಯಾಪಾರಿಗಳು ಅಭಿವೃದ್ಧಿಯಾಗುತ್ತಿದ್ದರೆ, ಇತ್ತ ಮಾನ, ಮರ್ಯಾದೆ, ಅನಿವಾರ್ಯತೆಗೆ ಸಿಕ್ಕಿದ ಜನ ಸಾಮಾನ್ಯರು, ಬಡವರು ಶಕ್ತಿ ಮೀರಿ ಒಡವೆ ಖರೀದಿ ಮಾಡಿ ಮಗಳು ಅಳಿಯನಿಗೆ ನೀಡಿ ತಾವು ಸಾಲವನ್ನು ತೀರಿಸುವುದರಲ್ಲಿಯೇ ಬದುಕನ್ನು ಕಳೆಯುವಂತಾಗಿದೆ.

ಇಷ್ಟಕ್ಕೂ ಚಿನ್ನದ ಒಡವೆಗಳಿಲ್ಲದೆ ಮದುವೆ ಸಾಧ್ಯವಾಗುವುದಿಲ್ಲವೆ? ಅಥವಾ ಗಂಡಿನ ಮನೆಯವರ ಬೇಡಿಕೆಗೆ ಮಣಿದು ಚಿನ್ನಾಭರಣ ನೀಡುವ ಅನಿವಾರ್ಯತೆಯಿಂದ ಹೊರಬರಲು ಸಾಧ್ಯವಿಲ್ಲವೆ? ಈ ಪ್ರಶ್ನೆಗಳಿಗೆ ಉತ್ತರ ಕಷ್ಟವೇ.. ಅದು ಏನೇ ಇರಲಿ ಇಷ್ಟಕ್ಕೂ ನಾವು ಖರೀದಿಸುವ ಚಿನ್ನ ನಿಜಕ್ಕೂ ಅಪರಂಜಿನಾ ಎಂಬ ಪ್ರಶ್ನೆಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ್ಗೆ ಚರ್ಚೆಗೆ ಬರುತ್ತಿರುತ್ತವೆ. ಅದು ಆಚೆಗಿರಲಿ ಆದರೆ ಚಿನ್ನ ಖರೀದಿಗೆ ಮುನ್ನ ನಾವು ಒಂದಷ್ಟು ತಯಾರಿಗಳನ್ನು ಮಾಡಿಕೊಳ್ಳುವುದು ಒಳಿತು.

ಚಿನ್ನ ಖರೀದಿಸುವವರು ಅಧಿಕೃತ ಅಂಗಡಿಗಳಲ್ಲೇ ಖರೀದಿಸುವುದು ಒಳ್ಳೆಯದು. ಅಷ್ಟೇ ಅಲ್ಲ ಚಿನ್ನಾಭರಣಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಪಡೆದುಕೊಳ್ಳಬೇಕು. ಚಿನ್ನ ಖರೀದಿಸಿದ ಬಗ್ಗೆ ಅರಿವು ಇರುವವರನ್ನು ಜತೆಗೆ ಕರೆದೊಯ್ದರೆ ಇನ್ನಷ್ಟು ಒಳ್ಳೆಯದು ಇಲ್ಲದೆ ಹೋದರೆ ಮೋಸ ಹೋಗುವ ಸಾಧ್ಯತೆಯೂ ಇಲ್ಲದಿಲ್ಲ.

ಇನ್ನು ಚಿನ್ನದ ಬಗ್ಗೆ ದೊರೆತ ಮಾಹಿತಿಗಳ ಪ್ರಕಾರ ನೋಡುವುದಾದರೆ ಎಂಟು ಗ್ರಾಂ(ಒಂದು ಪವನ್) ಚಿನ್ನದ ಸರ ತಯಾರಿಸಲು 1.5 ಗ್ರಾಂನಷ್ಟು ತಾಮ್ರ ಬೇಕಾಗುತ್ತದೆಯಂತೆ. ಹಾಗಾದರೆ ನಮ್ಮ ಚಿನ್ನದ ಸರದಲ್ಲಿ ನಿಜವಾಗಿಯೂ ಇರುವ ಚಿನ್ನದ ಅಂಶ 6.5 ಗ್ರಾಂ ಎಂದಾಯಿತು. ಅಂದರೆ ನಾವು 1.5 ಗ್ರಾಂ ತಾಮ್ರಕ್ಕೆ ಚಿನ್ನದ ಬೆಲೆಯನ್ನೇ ನೀಡುತ್ತಿದ್ದೇವೆ ಎಂಬುದು ಇದರಿಂದ ಮನದಟ್ಟಾಗುತ್ತದೆ. ಹೀಗಾಗಿಯೇ ದೊಡ್ಡ ದೊಡ್ಡ ಅಂಗಡಿಯವರು ನಮ್ಮಲ್ಲಿ ಚಿನ್ನಕ್ಕೆ ಕೂಲಿ, ವೆಸ್ಟೇಜ್ ಇಲ್ಲ ಎನ್ನುತ್ತಾ ಗ್ರಾಹಕರನ್ನು ಮರಳು ಮಾಡುತ್ತಿವೆ. ಆ ಮೂಲಕವೇ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಈ ಕುರಿತಂತೆ ಕೆಲವರು ಒಂದಷ್ಟು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಅವರು ಹೇಳುವಂತೆ ಎಂಟು ಗ್ರಾಂ ನ ಚಿನ್ನದ ಸರಕ್ಕೆ ತಾಮ್ರವನ್ನು ಸೇರಿಸುವುದರ ಮೂಲಕ ಆಭರಣವನ್ನು ತಯಾರಿಸಲಾಗುತ್ತದೆ. ಅಂದರೆ  8 ಗ್ರಾಂ ಚಿನ್ನದ ಸರ  ತಯಾರಿಸಲು 1.5 ಗ್ರಾಂ ತಾಮ್ರ ಮತ್ತು 6.5 ಗ್ರಾಂ ಚಿನ್ನವನ್ನು ಸೇರಿಸಲಾಗುತ್ತದೆ. ಆ  ಮೂಲಕ ಚಿನ್ನದ ಸರ ತಯಾರಾಗುತ್ತದೆ. ಇಲ್ಲಿ  ಒಬ್ಬ ಗ್ರಾಹಕ  ಚಿನ್ನವನ್ನು ಖರೀದಿಸುವಾಗ, 6.5 ಚಿನ್ನ + 1.5 ತಾಮ್ರ  ಒಟ್ಟಿಗೆ 8 ಗ್ರಾಂ ಚಿನ್ನವನ್ನು ಬಿಲ್ಲಿನಲ್ಲಿ  ಹಾಕಲಾಗುತ್ತದೆ.  ಜತೆಗೆ ತಾವು ಸೇರಿಸಿ ತಾಮ್ರಕ್ಕೆ ಚಿನ್ನದ ಬೆಲೆಯನ್ನೇ ಪಡೆಯಲಾಗುತ್ತದೆ. ಬಹಳಷ್ಟು ಮಾರಾಟಗಾರರು ಇದನ್ನು (1.5 ಗ್ರಾಂ ತಾಮ್ರವನ್ನು) ವೆಸ್ಟೇಜ್ ಎಂದು ತೋರಿಸುವುದರ ಮೂಲಕ ಸೇರಿಸಿ ಹಣ ಪಡೆಯುತ್ತಾರೆ.

ಚಿನ್ನದ ವಿಚಾರದಲ್ಲಿ ಹೆಚ್ಚಿನವರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಹೀಗಾಗಿ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಒಂದಷ್ಟು ವಿಚಾರಗಳು ಚರ್ಚೆಯಾಗುವುದರೊಂದಿಗೆ ಚಿನ್ನ ಖರೀದಿಯಲ್ಲಿ ಗ್ರಾಹಕನಿಗೆ ಆಗುವ ಒಂದಷ್ಟು ನಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ತಜ್ಞರು ಮಾಡುವುದರೊಂದಿಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕಾಗಿದೆ. ಚಿನ್ನವನ್ನು ಹಣವಿದ್ದವರು ಮಾತ್ರ ಖರೀದಿಸುತ್ತಿಲ್ಲ. ಬಡವರೂ ಖರೀದಿಸುತ್ತಾರೆ. ಹೀಗಿರುವಾಗ ಗಗನಕ್ಕೇರುತ್ತಿರುವ ಬೆಲೆಯ ಬಿಸಿಯಲ್ಲಿ ಸಣ್ಣ ಸಣ್ಣ, ಉಳಿತಾಯ ಕೂಡ ತಂಪು ನೀಡಬಹುದಲ್ಲವೆ?

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು