ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿ ಆರೋಗ್ಯ ಸಮಸ್ಯೆಗಳ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರು ನಿನ್ನೆ ಡಿಸ್ಚಾರ್ಜ್ ಆಗಿ, ಮತ್ತೆ ಜೈಲು ಸೇರಿದ್ದಾರೆ.
ಎದೆನೋವಿನ ಹಿನ್ನೆಲೆಯಲ್ಲಿ ನವೆಂಬರ್ 25 ರಂದು ರೋಷನ್ ಬೇಗ್ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೇಗ್ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು. ನ. 22ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು.
ಹೆಚ್ಚು ಬಡ್ಡಿ ಹಣ ನೀಡುವುದಾಗಿ ಗ್ರಾಹಕರನ್ನು ನಂಬಿಸಿ, ವಂಚನೆ ಮಾಡಿದ ಐಎಂಎ ಕಂಪನಿಯ ಎಂಡಿ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ ಮಾಜಿ ಸಚಿವ ರೋಷನ್ ಬೇಗ್ ಕೋಟ್ಯಂತರ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಈ ಹಿಂದೆ ಮನ್ಸೂರ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋವನ್ನು ರಿಲೀಸ್ ಮಾಡಿದ್ದರು.