News Karnataka Kannada
Monday, April 29 2024
ಬೆಂಗಳೂರು ನಗರ

ಅಪ್ಪುನನ್ನು ನೆನೆದು ಅಭಿಮಾನಿಗಳು ಕಣ್ಣೀರು ಹಾಕಬೇಡಿ: ನಟ ರಾಘವೇಂದ್ರ ರಾಜ್‍ಕುಮಾರ್

Bengalore
Photo Credit :

ಅಪ್ಪುನನ್ನು ನೆನೆದು ಅಭಿಮಾನಿಗಳು ಕಣ್ಣೀರು ಹಾಕಬೇಡಿ ಎಲ್ಲರೂ ಒಂದೊಂದು ಗಿಡ ನೆಡಿ: ನಟ ರಾಘವೇಂದ್ರ ರಾಜ್‍ಕುಮಾರ್

ಬೆಂಗಳೂರು ಮಾರ್ಚ್‌ 20: ಅಪ್ಪುನನ್ನು ನೆನೆದು ಅಭಿಮಾನಿಗಳು ಕಣ್ಣೀರು ಹಾಕುವುದು ಬೇಡ. ಅದರ ಬದಲಿಗೆ ಅಪ್ಪು ಹೆಸರಿನಲ್ಲಿ ಎಲ್ಲರೂ ಒಂದೊಂದು ಗಿಡ ನೆಡೋಣ. ಈ ಮೂಲಕ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗೋಣ ಎಂದು ಹಿರಿಯ ನಟ ರಾಘವೇಂದ್ರ ರಾಜ್‍ಕುಮಾರ್ ಕರೆ ನೀಡಿದರು.

ಅದಮ್ಯ ಚೇತನ ಸಂಸ್ಥೆ ವತಿಯಿಂದ 325ನೇ `ಹಸಿರು ಭಾನುವಾರ’ ಕಾರ್ಯಕ್ರಮವನ್ನು ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಸ್ವಾಭಿಮಾನ ಪಾರ್ಕ್‍ನಲ್ಲಿ ಕನ್ನಡದ ಕಣ್ಮಣಿಗಳಾದ ಕೇಂದ್ರ ಮಾಜಿ ಸಚಿವ ದಿ. ಅನಂತಕುಮಾರ್ ನೆನಪಿನಲ್ಲಿ ಮತ್ತು ನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಸ್ಮರಣಾರ್ಥವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಭಾನುವಾರ ಅವರು ಮಾತನಾಡಿದರು.

ಭೂಮಿಯನ್ನು ಮನುಷ್ಯ ತನ್ನದು ಎಂದುಕೊಂಡಿದ್ದಾನೆ. ನಮಗೋಸ್ಕರ ಮಾಡಿದ್ದು ಎಂದುಕೊಂಡಿದ್ದಾನೆ. ಆದರೆ ಈ ಭೂಮಿಯ ಮೇಲೆ ಕೋಟ್ಯಾಂತರ ಜೀವರಾಶಿಗಳಿವೆ. ಅವುಗಳನ್ನು ತಮ್ಮದೆಂದು ಭಾವಿಸಿ ಅವುಗಳ ಉಳಿವಿಗೆ ಅನುವು ಮಾಡಿಕೊಡಬೇಕಾದ್ದ ನಮ್ಮ ಕರ್ತವ್ಯವಲ್ಲವೇ ಎಂದ ಅವರು, ಇಂದು ನಾನು ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್‍ಕುಮಾರ್ ಅಗಿ ಬಂದಿಲ್ಲ. ಅದಮ್ಯ ಚೇತನ ಕುಟುಂಬದ ಸದಸ್ಯನಾಗಿ, ಪುನೀತ್ ರಾಜ್‍ಕುಮಾರ್ ಅವರ ಪ್ರತಿನಿಧಿಯಾಗಿ ಬಂದಿದ್ದೇನೆ. ಈವರೆಗೆ ಸಿನಿಮಾ ನೋಡಿ ಸಹಕರಿಸುತ್ತಿದ್ದ ಅಭಿಮಾನಿಗಳು ಗಿಡ ನೆಡುವ ಕಾರ್ಯಕ್ಕೂ ಸಹಕಾರ ನೀಡುತ್ತಾರೆ ಎಂಬ ನಂಬಿಕೆ ನನ್ನದು. ಇದೀಗ ಇಂದಿನ ಸಮಾಜಕ್ಕೆ ಪರಿಸರದ ಅಗತ್ಯವೂ ಇದೆ. ಹೀಗಾಗಿ ಸಸಿ ನೆಡಲು ಆಗಮಿಸಿದ್ದೇನೆ. ಈ ಕಾರ್ಯಕ್ಕೆ ಅಭಿಮಾನಿಗಳು ಕೂಡ ನೆರವು ನೀಡಬೇಕು. ಎಲ್ಲಾ ಸೇವೆಗಳಿಗಿಂತ ಪರಿಸರ ಕಾಪಾಡುವುದು ದೊಡ್ಡ ಸೇವೆ. ಇದನ್ನು ಅದಮ್ಯ ಚೇತನ ಹಲವು ವರ್ಷಗಳಿಂದ ಮಾಡುತ್ತಾ ಬಂದಿರುವುದು ಆದರ್ಶವಾಗಿದೆ. ಇದರಿಂದ ಜನರಿಗೆ ನೆರಳು ಕೊಡುತ್ತದೆ ಎಂಬುದಲ್ಲ, ಪ್ರಾಣಿ-ಪಕ್ಷಿಗಳಿಂದ ಹಿಡಿದು ಸಕಲ ಜೀವರಾಶಿಗೂ ಇದು ನೆರವಾಗುತ್ತದೆ. ಹೀಗಾಗಿ ಅಭಿಮಾನಿಗಳೆಲ್ಲರೂ ಗಿಡ ನೆಟ್ಟು, ಅದಮ್ಯ ಚೇತನದ ಕೆಲಸಕ್ಕೆ ನಾವೂ ಕೈ ಜೋಡಿಸೋಣ ಎಂದರು.

ಈವರೆಗೆ ನಾವು ಸಿನಿಮಾ ಮಾಡುತ್ತಿದ್ದೆವು. ಅದು ನಮ್ಮ ಜೀವನಕ್ಕಾಗಿ ಮಾಡುತ್ತಿದ್ದೆವು. ಆದರೆ ಇದು ಸಮಾಜಕ್ಕಾಗಿ ಮಾಡುವಂಥದ್ದು. ನಮ್ಮ ತಂದೆಯವರು ಬಂಗಾರದ ಮನುಷ್ಯ, ಮಣ್ಣಿನ ಮಗನಂತಹ ಸಿನಿಮಾಗಳನ್ನು ಮಾಡಿದ್ದಾರೆ. ಅದರ ಉದ್ದೇಶ ಆಗ ಅರಿಯಲಿಲ್ಲ. ಏನೋ ಸಿನಿಮಾ ಅನ್ನುವ ರೀತಿ ಸ್ವೀಕರಿಸಿದೆವು. ಮಣ್ಣು, ಕೃಷಿಯನ್ನು ಕಾಪಾಡುವ, ಸಂರಕ್ಷಿಸುವ ಕೆಲಸ ಮಾಡಬೇಕು ಎಂಬ ಒಳ್ಳೆಯ ಸಂದೇಶವನ್ನು ಹೊತ್ತು ಆ ಸಿನಿಮಾಗಳನ್ನು ಮಾಡಿದರು. ಅದನ್ನು ಅರಿತು ನನ್ನ ಸೋದರ ಕೂಡ ಭೂಮಿಗೆ ಏನಾದರೂ ಮಾಡಬೇಕು ಎಂದು ಗಂಧದ ಗುಡಿ ಸಿನಿಮಾ ಮಾಡುತ್ತಿದ್ದು, ಅದು ತಯಾರಿ ಹಂತದಲ್ಲಿದೆ. ಅದು ಸಿದ್ಧವಾದ ನಂತರ ಒಂದು ದೊಡ್ಡ ಸಂದೇಶ ಈ ಸಮಾಜಕ್ಕೆ ಅದರಿಂದ ಸಿಗುತ್ತದೆ ಎಂದು ರಾಘವೇಂದ್ರ ರಾಜ್‍ಕುಮಾರ್ ನುಡಿದರು.

 

ಅದಮ್ಯ ಚೇತನದ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್ ಮಾತನಾಡಿ,

ಅನಂತಕುಮಾರ್ ಮತ್ತು ಪುನೀತ್‍ರಾಜ್‍ಕುಮಾರ್ ಈ ಸಮಾಜದ ಎರಡು ಕಣ್ಣುಗಳಾಗಿದ್ದವು. ಅವುಗಳನ್ನು ಕಳೆದುಕೊಂಡಿದ್ದರೂ ಇದೀಗ ಮರ,ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಅವರ ಸೇವೆಯನ್ನು ಸಾರ್ಥಕಗೊಳಿಸಲು ಮುಂದಾಗಿದ್ದೇವೆ. ರಾಘವೇಂದ್ರ ರಾಜ್‍ಕುಮಾರ್ ಒಬ್ಬ ಕಾರ್ಯಕರ್ತನಾಗಿ ಬಂದು ಗಿಡ ನೆಟ್ಟಿದ್ದಾರೆ. ಅನಂತಕುಮಾರ್ ಅವರಿಗೆ ರಾಜ್ ಕುಟುಂಬದ ಬಗ್ಗೆ ಒಳ್ಳೆಯ ಗೌರವ, ಅಭಿಮಾನ ಇತ್ತು. ರಾಜ್‍ಕುಮಾರ್ ಸೇರಿದಂತೆ ಅವರು ಕುಟುಂಬ ವರ್ಗ ಸಿನಿಮಾಗೆ ಮಾತ್ರ ಸೇವೆಯನ್ನು ಸೀಮಿತಗೊಳಿಸಲಿಲ್ಲ. ಚಿತ್ರರಂಗದಲ್ಲಿರುವವರು ಸಮಾಜ ಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ ಹಲವು ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು.

ಒಬ್ಬರಿಗೆ ಒಂದು ಮರ…

ಅದಮ್ಯ ಚೇತನದ ವತಿಯಿಂದ ಬಿಸಿಯೂಟ ಕಾರ್ಯಕ್ರಮ ನಡೆಸುತ್ತಿದ್ದು, ಅಡುಗೆ ಮನೆಯಲ್ಲಿ ಅಕ್ಕಿ ತೊಳೆದದ್ದು, ತರಕಾರಿ ತೊಳೆದ ನೀರನ್ನು ವ್ಯರ್ಥ ಮಾಡುವುದು ಬೇಡ ಎನಿಸಿ, ಅದನ್ನು ಡ್ರಮ್‍ಗೆ ತುಂಬಿಸಿಕೊಟ್ಟು ನಂತರ ಅದನ್ನು ಟ್ಯಾಂಕರ್‍ಗೆ ತುಂಬಿಸಿಕೊಂಡು ಗಿಡಗಳಿಗೆ ನೀರು ಹಾಕಲು ಹೋದೆವು. ಗಿಡಗಳೇ ಕಾಣಲಿಲ್ಲ. ಆಗಲೇ ಅದಮ್ಯ ಚೇತನದ ವತಿಯಿಂದ ಗಿಡಗಳನ್ನು ಬೆಳೆಸಬೇಕೆಂಬ ಆಲೋಚನೆ ಬಂದಿದ್ದು, ಅಂದಿನಿಂದ ಅದಮ್ಯ ಚೇತನಕ್ಕೂ, ಗಿಡಗಳಿಗೂ ನಂಟು ಬೆಳೆಯಿತು ಎಂದು ಅಭಿಯಾನ ನಡೆದುಬಂದ ಹಾದಿಯನ್ನು ತೇಜಸ್ವಿನಿ ಅನಂತಕುಮಾರ್ ನೆನಪಿಸಿಕೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು