ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏಕಾಏಕಿ ಮಾರ್ಗಸೂಚಿ ಬದಲಾವಣೆ ಮಾಡಿದೆ. ರಾಜ್ಯಾದ್ಯಂತ ಹೊಸ ನಿಯಮಗಳು ಜಾರಿಗೆ ಬಂದಿವೆ.
ಮೇ 4ರವರೆಗೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಸೇವೆಗಳು ಬಂದ್ ಆಗಲಿವೆ ಎಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಅಲ್ಲದೇ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡುತ್ತಿದ್ದಾರೆ.
ಮಠ, ಮಂದಿರ, ಮಸೀದಿ, ಚರ್ಚ್ ಗಳಿಗೆ ಸಾರ್ವಜನಿಕರ ಪ್ರವೇಶ್ ನಿರ್ಬಂಧಿಸಲಾಗಿದ್ದು,
ಖಾಸಗಿ ಸಂಸ್ಥೆಗಳಲ್ಲಿ ಕೂಡ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಬೇರೆ ಸಿಬ್ಬಂದಿಗೆ ಅವಕಾಶವಿಲ್ಲ. ಔಷಧ ಅಂಗಡಿ, ದಿನಸಿ, ಹಣ್ಣು-ತರಕಾರಿ, ಸಲೂನ್ ಬ್ಯೂಟಿಪಾರ್ಲರ್, ವೈನ್ ಶಾಪ್ ಹೊರತುಪಡಿಸಿ ಉಳಿದೆಲ್ಲ ಅಂಗಡಿ, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ ಸೇರಿದಂತೆ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗುತ್ತಿದೆ.
ವೀಕೆಂಡ್ ಕರ್ಫ್ಯೂ ನಾಳೆಯಿಂದ ಜಾರಿಯಾಗುತ್ತಿದ್ದರೂ ಏಕಾಏಕಿ ಮಾರ್ಗಸೂಚಿ ಬದಲಿಸಿರುವ ಸರ್ಕಾರದ ನಿರ್ಧಾರದಿಂದ ಬೆಚ್ಚಿಬಿದ್ದಿರುವ ವ್ಯಾಪಾರಸ್ಥರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.