ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದೆ. ನಮ್ಮ ಕಂಬಳ, ಬೆಂಗಳೂರು ಕಂಬಳ ಎಂಬ ಹೆಸರಿನಲ್ಲಿ ಶನಿವಾರ ಮತ್ತು ಭಾನುವಾರ (ನ.25, 26) ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ಈ ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜ್ಕುಮಾರ್ ಅವರು ಶನಿವಾರ (ನ.25) ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳವನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ.