ದೊಡ್ಡಬಳ್ಳಾಪುರ: ವೃದ್ಧರನ್ನು ಟಾರ್ಗೆಟ್ ಮಾಡಿ ಚೈನ್ ಸ್ಕ್ಯಾಂಚಿಂಗ್ ಮಾಡುತ್ತಿದ್ದ ಗುಂಪನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿ 40 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಶ್ರೀನಿವಾಸಮೂರ್ತಿ (31) ಹಾಗೂ ವೆಂಕಟೇಶ್ (23) ಎಂದು ಗುರುತಿಸಲಾಗಿದೆ. ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೇಲೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣಗಳಲ್ಲಿಯೂ ಕೇಸ್ ದಾಖಲಾಗಿದೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸಪೆಕ್ಟರ್ ಸಾಧಿಕ್ ಪಾಷಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧನದ ವೇಳೆ ಆರೋಪಿಗಳಿಂದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 40 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ವಶಪಡಿಸಿಕೊಂಡ ಕಳವಾದ ಚಿನ್ನವನ್ನು ಮಾಲೀಕರಿಗೆ ವಾಪಸ್ ನೀಡಿದ್ದಾರೆ.

