ನಂಜನಗೂಡು: ಹೋಟೆಲ್ ಆರಂಭಿಸಲು ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆದು ಬಾರ್ ಆರಂಭಿಸಿರುವ ವಿರುದ್ದ ಗ್ರಾಮಸ್ಥರು ಮತ್ತು ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾರ್ ಮುಚ್ಚದಿದ್ದಲ್ಲಿ ಗ್ರಾಮವನ್ನೇ ತೊರೆಯುವ ನಿರ್ಧಾರ ಮಾಡಿದ್ದಾರೆ. ನಂಜನಗೂಡು ತಾಲ್ಲೂಕು ಎಲಚಗೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ ಮೂರು ದಿನಗಳ ಹಿಂದೆ ದಿಢೀರ್ ಬಾರ್ ತಲೆ ಎತ್ತಿ ನಿಂತಿದೆ. ಸದರಿ ಸ್ಥಳದಲ್ಲಿ ಹೋಟೆಲ್ ನಡೆಸುವುದಾಗಿ ಕಸುವಿನಹಳ್ಳಿ ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆದಿದ್ದರು.

ಹೋಟೆಲ್ ಆರಂಭಿಸಲು ಅನುಮತಿ ಪಡೆದು ದಿಢೀರನೆ ಬಾರ್ ಓಪನ್ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಬಾರ್ ತೆರೆದಿರುವ ಪ್ರದೇಶದ ಸಮೀಪ ಶಾಲೆಗಳಿವೆ. ಅಕ್ಕಪಕ್ಕದ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರು ಶಾಲಾ ಮಕ್ಕಳು ಗ್ರಾಮಗಳ ಸಾರ್ವಜನಿಕ ಮಹಿಳೆಯರು ಓಡಾಡುತ್ತಾರೆ.

ಈ ಹಿನ್ನಲೆ ಇಲ್ಲಿ ಬಾರ್ ತೆರೆಯಬಾರದೆಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ವಿರೋಧ ಲೆಕ್ಕಿಸದೆ ಇದೀಗ ಬಾರ್ ತೆರೆಯಲಾಗಿದೆ. ಇದರಿಂದ ಬೇಸತ್ತಿರುವ ಗ್ರಾಮಸ್ಥರು ಬೃಹತ್ ಪ್ರತಿಭಟನೆಗೂ ನಿರ್ಧರಿಸಿದ್ದಾರೆ. ಇದಕ್ಕೂ ಸರ್ಕಾರ ಮಣಿಯದಿದ್ದಲ್ಲಿ ಗ್ರಾಮ ತೊರೆಯುವುದಾಗಿ ಎಚ್ಚರಿಸಿದ್ದಾರೆ.