ಬೆಂಗಳೂರು: ಮಾದಕ ವಸ್ತು ಮಾರುತ್ತಿದ್ದ ಜಾಲವನ್ನು ಸಿಟಿ ಮಾರ್ಕೆಟ್ ಪೊಲೀಸರು ಭೇದಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ₹ 2 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ರಾಜಸ್ಥಾನದ ಪಪ್ಪುರಾಮ್ ಅಲಿಯಾಸ್ ಪಪ್ಪು (20) ಹಾಗೂ ಚುನ್ನಿಲಾಲ್ (20) ಬಂಧಿತರು. ಅವರಿಂದ 1 ಕೆ.ಜಿ 820 ಗ್ರಾಂ ಬ್ರೌನ್ ಶುಗರ್, 859 ಗ್ರಾಂ ಎಂಡಿಎಂಎ, 1 ಕೆ.ಜಿ 700 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ನಗರದ ಹೊರವಲಯದ ಚಂದಾಪುರ, ಆನೇಕಲ್ ಹಾಗೂ ಸುತ್ತಮುತ್ತ ಬಾಡಿಗೆ ಮನೆಯಲ್ಲಿ ಆರೋಪಿಗಳು ವಾಸವಿರುತ್ತಿದ್ದರು. ಪೊಲೀಸರಿಗೆ ಸುಳಿವು ಸಿಗಬಾರದೆಂದು ಮೂರು ತಿಂಗಳಿಗೊಮ್ಮೆ ಮನೆ ಹಾಗೂ ಸಿಮ್ಕಾರ್ಡ್ ಬದಲಾಯಿಸುತ್ತಿದ್ದರು’ ಎಂದೂ ಹೇಳಿದರು.