ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ್ದ ಆರೋಪದಲ್ಲಿ ಶಿವಮೊಗ್ಗ ಮೂಲದ ಭವಾನಿರಾವ್ ಮೋರೆ (37) ಎಂಬ ವ್ಯಕ್ತಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಕಬ್ಬನ್ಪಾರ್ಕ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಆರೋಪಿಯು ವಿಜಯನಗರ ನಿವಾಸಿ ಹಾಗೂ ಕರ್ನಾಟಕ ಬಾರ್ ಆಯಂಡ್ ರೆಸ್ಟೋರೆಂಟ್ ಓನರ್ಸ್ ವುಮೆನ್ ಎಂಪ್ಲಾಯೀಸ್ ಸರ್ವಿಸ್ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಸುರೇಶ್ ಎಂಬವರಿಗೆ 25 ಲಕ್ಷ ರೂ. ವಂಚಿಸಿದ್ದ. ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ತಾನು ಶಿವಮೊಗ್ಗ ಮೂಲದ ಬಿಜೆಪಿ ಮುಖಂಡನಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಸಹಿತ ಎಲ್ಲ ಸಚಿವರು ಹಾಗೂ ಬಿಜೆಪಿ ಮುಖಂಡರು ಪರಿಚಯವಿದೆ ಎಂದು ಹೇಳಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.