ವಿಜಯಪುರ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಗರ್ಭಿಣಿಯನ್ನು ಕರೆದೊಯ್ಯುತ್ತಿದ್ದ 108 ಆಂಬ್ಯುಲೆನ್ಸ್ ಡಿಕ್ಕಿಯಾಗಿ ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿರುವ ಘಟನೆ ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭಾಗ್ಯಶ್ರೀ ರಾವುತಪ್ಪ ಪಾರಣ್ಣನವರ (19) ಮೃತ ಗರ್ಭಿಣಿ ಎಂದು ಗುರುತಿಸಲಾಗಿದೆ. ಭಾಗ್ಯಶ್ರೀಗೆ ಇಂದು ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ, ತವರು ಮನೆ ನಾವದಗಿಯಿಂದ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು.
ಸಮುದಾಯ ಆಸ್ಪತ್ರೆಗೆ ಕರೆತಂದ ವೇಳೆ ಭಾಗ್ಯಶ್ರೀ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ, ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡುವಂತೆ ತಾಳಿಕೋಟೆ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದರು. ಈ ಹಿನ್ನಲೆ ಜಿಲ್ಲಾಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಆಗಮಿಸುತ್ತಿದ್ದ ವೇಳೆ ಘಟನೆ ನಡೆದಿದೆ. ಗರ್ಭಿಣಿ ಹಾಗೂ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.