ಹಾವೇರಿ: ನಗರದ ಡಿ.ಸಿ ಕಛೇರಿಯ ಎದುರಿನ ಗುಡ್ಡೆಯ ಮೇಲೆ ನೂತನವಾಗಿ ನಿರ್ಮಾಣವಾಗಿರುವ ವಿಜ್ಞಾನ ಕೆಂದ್ರ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಈ ಮೊದಲು ಇಲ್ಲಿನ ವಿದ್ಯಾರ್ಥಿಗಳು ವಿಜ್ಞಾನ ಪ್ರದರ್ಶನಗಳು ಹಾಗು ನಕ್ಷತ್ರಪುಂಜವನ್ನು ನೋಡಲು ಧಾರವಾಡ, ದಾವಣಗೆರೆ ಸೇರಿದಂತೆ ಬೇರೆ ಊರುಗಳಿಗೆ ಹೋಗಬೇಕಾಗಿದ್ದು, ಈಗ ಆ ಸಮಸ್ಯೆ ಬಗೆಹರಿದಿದೆ.
ಫೆ.೧೮ರಂದು ಉದ್ಘಾಟನೆಯಾದ ವಿಜ್ಞಾನ ಕೆಂದ್ರ ಫೆ.೨೦ರಿಂದ ಸಾರ್ವಜನಿಕರಿಗೆ ತೆರೆದುಕೊಂಡಿದೆ. ಏಳು ಕೋಟಿ ವೆಚ್ಚದಲ್ಲಿ ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ನಾಲ್ಕು ವಿಭಾಗಗಳಿದ್ದು, ಹಲವು ಪ್ರಯೋಗ ಹಾಗು ವಿಸ್ಮಯಗಳನ್ನು ಒಳಗೊಂಡಿದೆ.
ಭೌತಶಾಸ್ತ್ರ, ಖಗೋಳಶಾಸ್ತ್ರ, ತಾರಾಲಯ, ಬಾಹ್ಯಾಕಾಶ, ಮೋಜಿನ ಗ್ಯಾಲರಿಗಳು, ವೈಜ್ಞಾನಿಕ ಪ್ರಪಂಚದ ವಿವಿಧ ಮಾದರಿಗಳು ವಿಜ್ಞಾನಪ್ರಿಯರಿಗೆ ಉಪಯುಕ್ತವಾಗಿದ್ದು, ಸುನಾಮಿ, ಪ್ರವಾಹ, ಭೂಕುಸಿತ, ಭೂಕಂಪ, ಆಕಾಶಕಾಯಗಳು, ವಿಜ್ಞಾನ ರಸಪ್ರಶ್ನೆಗಳಿಗಾಗಿ ಗಣಕೀಕೃತ ಕೌಂಟರ್ಗಳು, ಗುರುತ್ವಾಕರ್ಷಣೆಯ ಮಾದರಿಗಳು, ಇಸ್ರೋದ ಸಾಧನೆಗಳನ್ನು ಪ್ರದರ್ಶಿಸುವ ರಾಕೆಟ್ಗಳನ್ನು ಕಾಣಬಹುದಾಗಿದೆ.
ಇದರ ವಿನ್ಯಾಸ ಹಾಗು ನಿರ್ಮಾಣವನ್ನು ನಿರ್ಮಿತಿ ಕೇಂದ್ರ ಮಾಡಿದೆ.