ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ ನಂತರ ಮೌಲ್ವಿ ತನ್ವೀರ್ ಪೀರಾ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಮೌಲ್ವಿಗೆ ಐಸಿಸ್ ಲಿಂಕ್ ಇದೆ ಎಂದು ಆರೋಪಿಸಿದ್ದರು.
ಇದೀಗ ಯತ್ನಾಳ್ ಆರೋಪಕ್ಕೆ ಕಾಂಗ್ರೆಸ್ ಮುಖಂಡರೊಬ್ಬರು ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಫೋಟೋ ಬಿಡುಗಡೆ ಮಾಡಿ ತಿರುಗೇಟು ನೀಡಿರುವ ಧಾರವಾಡದ ಮುಸ್ಲಿಂ ಮುಖಂಡ ಇಸ್ಮಾಯಿಲ್ ತಮಟಗಾರ, ಶಾಸಕ ಯತ್ನಾಳ್ ಆರೋಪ ಮಾಡಿದ್ದ ಮೌಲ್ವಿ ತನ್ವೀರ್ ಪೀರಾ ಜೊತೆಯಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಇರುವ ಫೋಟೋ ಬಿಡುಗಡೆ ಮಾಡಿದ್ದಾರೆ.
ಫೋಟೋ ಬಿಡುಗಡೆ ಮಾಡಿ ಹೇಳಿಕೆ ನೀಡಿದ ಇಸ್ಮಾಯಿಲ್ ತಮಟಗಾರ, ಯತ್ನಾಳ್ ಅವರು ಒಂದು ಫೋಟೋ ಬಿಡುಗಡೆ ಮಾಡಿದ್ದಾರೆ. ಆ ಫೋಟೋಗಳನ್ನು ಈಗ ವೆಬ್ಸೈಟ್ನಿಂದ ತೆಗೆದಿದ್ದಾರೆ. ಅದೇ ವೆಬ್ಸೈಟ್ನಲ್ಲಿ ಬಿಜೆಪಿ ಮುಖಂಡರ ಫೋಟೋಗಳೂ ಇವೆ ಎಂದು ಹೇಳಿದರು. ಅದರಲ್ಲಿ ಗಡ್ಕರಿಯವರ ಫೋಟೋ ಸಹ ಇದೆ. ಇರಾಕ್ನಲ್ಲಿನ ಪ್ರಸಿದ್ಧ ದರ್ಗಾ ಅದು. ಆ ದರ್ಗಾದ ಮುಖ್ಯಸ್ಥರ ಜೊತೆ ಮೌಲ್ವಿ ತನ್ವೀರ್ ಪೀರಾ ಇರೋ ಫೋಟೋ ಇವೆ. ಅದೇ ಮುಖ್ಯಸ್ಥರನ್ನು ಗಡ್ಕರಿಯವರು ಈ ಹಿಂದೆ ಭೇಟಿಯಾಗಿದ್ದಾರೆ. ಆ ಭೇಟಿ ವೇಳೆಯ ಫೋಟೋ ಇದಾಗಿದೆ ಎಂದು ಹೇಳಿದ್ದಾರೆ.