ಧಾರವಾಡ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇಂದು (ಏಪ್ರಿಲ್ 15) ರಾತ್ರಿ ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಸಂಧಾನ ಸಭೆ ವಿಫಲವಾಗಿದ್ದು, ಇದೀಗ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದರು.
ಸಂಧಾನ ಸಭೆ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ನಾಳೆ, ( ಭಾನುವಾರ) ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ನನ್ನ ವಿರುದ್ದ ಕುತಂತ್ರ, ಷಡ್ಯಂತ್ರ ನಡೆದಿದೆ. ಇದರ ಹಿಂದೆ ಯಾರ ಮಾಡಿದಾರೆ ಎನ್ನುವುದು ನಾನು ಈಗ ಹೇಳಲ್ಲ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ. ನಾನು ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ತಿಳಿಸಿದರು.