ಹುಬ್ಬಳ್ಳಿ: ಬಿಜೆಪಿ ಹೀನಾಯ ಸ್ಥಿತಿ ತಲುಪಿದೆ.ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು ಬಂದಿರಲಿಲ್ಲ. ವೀಕ್ಷಕರು ಸಹ ಬಂದಿರಲಿಲ್ಲ. ರಾಜ್ಯ ಬಿಜೆಪಿಯ ಪರಿಸ್ಥಿತಿಗೆ ಇದೇ ಸಾಕ್ಷಿ. ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರೋದು ಅವರಿಗೆ ಬಿಟ್ಟ ವಿಚಾರ ಎಂದ ಅವರು ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಬದಲಾಗಿ ವಿಜಯೇಂದ್ರರನ್ನು ಮಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ. ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು. ಹೀಗಾಗಿ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಎಲ್ಲವನ್ನು ಕಾದು ನೋಡಿ, ಮುಂದೆ ನಿಮಗೆ ಗೊತ್ತಾಗುತ್ತೆ ಎಂದರು.
ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ. ಪಕ್ಷಕ್ಕಾಗಿ ಸಂಘಟನೆ ಮಾಡಿದವರನ್ನು, ದುಡಿದವರನ್ನು ದೂರವಿಡಲಾಗುತ್ತಿದೆ. ಇನ್ನು ಮಾಜಿ ಮುಖ್ಯಮಂತ್ರಿ ಹಿರಿಯ ನಾಯಕ ಸದಾನಂದ ಗೌಡರನ್ನು ದೆಹಲಿಗೆ ಕರೆಯಿಸಿ ಮೂರು ದಿನ ಕಾಯಿಸಿದರು. ಐದು ನಿಮಿಷ ಮಾತನಾಡುವಷ್ಟು ಸೌಜನ್ಯವನ್ನು ತೋರಲಿಲ್ಲ ಬಿಜೆಪಿ ಹಿರಿಯರನ್ನು ನಡೆಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆ. ಎಲ್ ಕೆ ಅಡ್ವಾಣಿ ಮುರುಳಿಮನೋಹರ್ ಜೋಷಿ ಮೊದಲಾದವರಿಗೆ ರಾಜಕೀಯ ನಿವೃತ್ತಿ ಕೊಟ್ಟುಬಿಟ್ಟರು.