ಬೆಳಗಾವಿ: ಎಂ ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಶೇಷ ನ್ಯಾಯಾಲಯ ರಚನೆ ಜೊತೆ ಪೂರ್ಣವಧಿ ನ್ಯಾಯಾಧೀಶರ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬಲಪಂಥೀಯ ಸಿದ್ಧಾಂತಗಳನ್ನು ವಿರೋಧಿಸುತ್ತಾ ತಮ್ಮದೇ ಸಾಮಾಜಿಕ ಹೋರಾಟಗಳನ್ನು ಮಾಡುತ್ತಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಕನ್ನಡ ಸಾಹಿತ್ಯ ಸಂಶೋಧಕ ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇನ್ನು ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಲಾಗಿದ್ದರೂ, ಹತ್ಯೆಗೆ ಯಾರು ಸುಪಾರಿ ಕೊಟ್ಟಿದ್ದು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಲಾಗಿದೆ ಎನ್ನುವ ಸತ್ಯಾಂಶ ತಿಳಿದುಬಂದಿಲ್ಲ. ಅಲ್ಲದೇ ಹಲವು ವರ್ಷಗಳಿಂದ ಈ ಪ್ರಕರಣ ನಿಧಾನಗತಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ರವರು ಸರ್ಕಾರಕ್ಕೆ ಕೋರಿದ್ದು. ಈ ಬಗ್ಗೆ ಜರೂರು ಅಗತ್ಯ ಕ್ರಮವಹಿಸಲು ಸಿದ್ದರಾಮಯ್ಯ ಸೂಚನೆ ಹೊರಡಿಸಿದ್ದಾರೆ.