ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತೀವ್ರವಾಗಿ ಚರ್ಚೆಯಾಗುತ್ತಿದೆ. ಹಲವು ಶಾಸಕರು ಡಿ.ಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ಸರ್ಕಾರ ಪತನವಾಗುವ ಕುರಿತು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಮಾತನಾಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಪತನವಾಗಲಿದೆ. ಅಲ್ಲದೆ, ಸಿಎಂ ಬದಲಾವಣೆ ಸಹ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಲ್ಲ. ಬದಲಾಗಿ ಆಪರೇಶನ್ ಹಸ್ತ ನಡೆಯುತ್ತಿದೆ. ಬರದ ನಡುವೆ ಕೈ ನಾಯಕರು ಕುರ್ಚಿಗಾಗಿ ಕಸರತ್ತು ನಡೆಸಿದ್ದಾರೆ. ನಾವೇನು ಸರ್ಕಾರ ಕೆಡವಲ್ಲ. ಅದು ತಾನಾಗಿಯೇ ಬೀಳಲಿದೆ ಎಂದರು. ಸರ್ಕಾರ ಬೀಳೋದನ್ನೇ ನಾವು ಕಾಯುತ್ತಿಲ್ಲ. ರಾಜ್ಯದ ಜನತೆಯ ಪರವಾಗಿ ನಮ್ಮ ಪಕ್ಷ ಇದೆ ಎಂದು ಹೇಳಿದರು.