News Karnataka Kannada
Sunday, May 05 2024
ಕರ್ನಾಟಕ

ಮೋದಿ ಭಕ್ತರಿಗೆ ಮೋದಿಯಿಂದಲೇ ಪಂಗನಾಮ ; ಸಿದ್ದರಾಮಯ್ಯ

Siddaramaiah Bng Dt 18 6 21 1862119 Newsk 1414652557
Photo Credit :

ಬೆಂಗಳೂರು, ; ದೇಶದಲ್ಲಿ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಯುವಕರಿಗೆ ಉದ್ಯೋಗ ಇಲ್ಲ, ಬಡತನ ಪ್ರಮಾಣ ಮಿತಿಮೀರಿದೆ, ಹಸಿವಿನಿಂದ ಸತ್ತವರ ಬಗ್ಗೆ, ದೇಶದ ಜಿಡಿಪಿ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡುವುದಿಲ್ಲ , ಅದನ್ನು ಬಿಟ್ಟು ಪಾಕಿಸ್ತಾನ, ರಾಮಮಂದಿರ ಮುಂತಾದ ಭಾವನಾತ್ಮಕ ವಿಚಾರಗಳ ಬಗ್ಗೆಯಷ್ಟೇ ಜನರ ಗಮನ ಸೆಳೆಯುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಪದ್ಮನಾಭ ನಗರದಲ್ಲಿ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿ, ಏಳು ವರ್ಷದಲ್ಲಿ ಹನ್ನೆರಡು ಕೋಟಿ ಉದ್ಯೋಗ ನಷ್ಟವಾಗಿದೆ. ಮೋದಿ ಮೋದಿ ಎಂದು ಕುಣಿಯುತ್ತಿದ್ದವರಿಗೆ ಮೋದಿಯವರು ಮೂರು ನಾಮ ಹಾಕಿದ್ದಾರೆ ಎಂದು ಲೇವಡಿ ಮಾಡಿದರು. ಕೊರೊನಾ ಎರಡನೇ ಅಲೆಯಲ್ಲಿ ಸಾವಿರಾರು ಜನ ಸಾವಿಗೀಡಾದರು.

ಇದಕ್ಕೆ ಯಾರು ಕಾರಣ? ಅಧಿಕಾರದಲ್ಲಿರುವ ಪಕ್ಷದ ನಾಯಕರ ಬೇಜಾವಾಬ್ದಾರಿ ಕಾರಣವಾಗುತ್ತದೆ. ಪದ್ಮನಾಭ ನಗರದಲ್ಲಿ ಕೊರೊನಾ ಸೋಂಕಿಗೆ ಯಾರಾದರೂ ಬಲಿಯಾಗಿದ್ದರೆ ಅದಕ್ಕೆ ಕ್ಷೇತ್ರದ ಶಾಸಕ ಆರ್. ಅಶೋಕ್ ಕಾರಣ. ಸರ್ಕಾರದ ಭಾಗವಾಗಿ ಸಚಿವರಾಗಿ ಅವರು ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಕ್ಷೇತ್ರದಿಂದ ಗೆದ್ದಿದ್ದಾರೆ, ಕೊರೊನಾ ಸೋಂಕಿತರಿಗೆ ಆಹಾರ, ಔಷಧಿ, ಆಸ್ಪತ್ರೆ ಒದಗಿಸಬೇಕಾಗಿದ್ದು ಅವರ ಕರ್ತವ್ಯವಲ್ಲವೆ? ಎಂದು ಪ್ರಶ್ನಿಸಿದರು.
ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಭೆ ಮಾಡಲು ಅಶೋಕ್ ಅವರ ಅನುಮತಿ ಪಡೆಯಬೇಕು ಅಂತಾರೆ, ಇದೇನು ಅಶೋಕ್ ಅವರ ಸ್ವಂತ ಸ್ವತ್ತೇ? ಇಂತಹಾ ಅಸಂಬದ್ಧ ವಿಷಯಗಳಿಗೆ ಪೊಲೀಸ್ ಇಲಾಖೆ ಸೊಪ್ಪು ಹಾಕಬಾರದು, ಇನ್ನು ಒಂದೂವರೆ ವರ್ಷ ಕಳೆದರೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಇದಕ್ಕೆಲ್ಲ ಉತ್ತರ ಕೊಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಡ ಜನರ ತೆರಿಗೆ ಹಣದಲ್ಲಿ ಬಡವರಿಗೆ ಉಚಿತ ಅಕ್ಕಿ ಕೊಡಲು ಸರ್ಕಾರಕ್ಕೇನು ಸಮಸ್ಯೆ? ಬಡವರ ಹಣ ಯಾರಪ್ಪನ ಮನೆಯ ಸ್ವತ್ತಲ್ಲ, ಆ ಹಣವನ್ನು ಬಡವರಿಗಾಗಿಯೇ ಖರ್ಚು ಮಾಡುವುದರಲ್ಲಿ ಏನು ತಪ್ಪಿದೆ? ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಏಳು ಕೆ.ಜಿ ಅಕ್ಕಿ ಕೊಡುತ್ತಿದ್ದಾವು, ಈ ಬಿಜೆಪಿ ಸರ್ಕಾರ ಅದಕ್ಕೆ ಕತ್ತರಿ ಹಾಕಿದೆ. ಇವರಿಗೆ ಬಡವರ ಅನ್ನ ಕಸಿಯುವ ಬುದ್ದಿ ಏಕೆ ಬಂದಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬಂದರೆ ಸ್ವರ್ಗ ಸೃಷ್ಟಿಯಾಗುತ್ತೆ ಎಂದಿದ್ದರು. ಯಡಿಯೂರಪ್ಪ ಅವರ ಭ್ರಷ್ಟಾಚಾರ ಜಾಸ್ತಿಯಾದ ಕಾರಣ ಅಧಿಕಾರದಿಂದ ಕಿತ್ತು ಹಾಕಿದ್ದಾರೆ ಇದು ಸತ್ಯಸಂಗತಿ. ಆರ್‍ಟಿಜಿಎಸ್ ಮೂಲಕ ಲಂಚ ಪಡೆದ ಭ್ರಷ್ಟ ರಾಜಕಾರಣಿ ಯಾರಾದ್ರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಈ ವಿಚಾರವನ್ನು ಹೇಳಲು ನಮ್ಮ ಕಾರ್ಯಕರ್ತರು ಹೆದರಬಾರದು ಎಂದು ಹುರಿದುಂಬಿಸಿದರು.ಕರ್ನಾಟಕದಲ್ಲಿ ಕೇವಲ 36,000 ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ, ವಾಸ್ತವದಲ್ಲಿ ಸುಮಾರು 4 ಲಕ್ಷ ಮಂದಿ ಸತ್ತಿದ್ದಾರೆ. ಇಡೀ ದೇಶದಲ್ಲಿ ಕನಿಷ್ಠ 50 ಲಕ್ಷ ಮಂದಿ ಸತ್ತಿದ್ದಾರೆ. ನರೇಂದ್ರ ಮೋದಿಯವರು ಕೊರೊನಾ ರೋಗಕ್ಕೆ ತ್ವರಿತವಾಗಿ ಲಸಿಕೆ ನೀಡುವ ಬದಲು ಜನರಿಗೆ ಚಪ್ಪಾಳೆ ತಟ್ಟಲು, ಜಾಗಟೆ ಬಾರಿಸಲು ಹೇಳಿದರು. ವಿಜ್ಞಾನದ ಯುಗದಲ್ಲಿ ಇಂಥಾ ಮೌಢ್ಯ ಬಿತ್ತುವುದು ಎಷ್ಟು ಸರಿ? ಎಂದರು.
ಯಡಿಯೂರಪ್ಪ ಅವರಿಗೆ ಮುಂಬಾಗಿಲ ಮೂಲಕ ರಾಜಕಾರಣ ಮಾಡಿಯೇ ಗೊತ್ತಿಲ್ಲ. ಆಪರೇಷನ್ ಕಮಲ, ಕುದುರೆ ವ್ಯಾಪಾರದಂತ ಹಿಂಬಾಗಿಲ ರಾಜಕಾರಣ ಮಾಡೋಕೆ ಮಾತ್ರ ಗೊತ್ತಿದೆ. ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿಸಿರುವುದೇ ಯಡಿಯೂರಪ್ಪ. ಹಾಗಾಗಿ ಬೊಮ್ಮಾಯಿಯವರು ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ರೀತಿ ಕೆಲಸ ಮಾಡದೆ ಸ್ವತಂತ್ರವಾಗಿ ಕೆಲಸ ಮಾಡೋಕಾಗುತ್ತಾ? ಎಂದರು.
ಬಿಜೆಪಿ ಬಂಡವಾಳ ಶಾಹಿಗಳ ಪಕ್ಷ, ಕಾಂಗ್ರೆಸ್ ಬಡವರ ಪರವಾದ ಪಕ್ಷ. ಗರೀಭಿ ಹಠಾವೋ ಘೋಷಣೆ ಮಾಡಿದ್ದು ಇಂದಿರಾಗಾಂಧಿ, ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡಿದವರು ನೆಹರು, ದೂರಸಂಪರ್ಕ ಅಭಿವೃದ್ಧಿ ಮಾಡಿದವರು ರಾಜೀವ್ ಗಾಂಧಿ, ದೇಶಕ್ಕೆ ಬಿಜೆಪಿಯ ಕೊಡುಗೆ ಏನು? ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೇ ಬಿಜೆಪಿ ಕೊಡುಗೆ ಎಂದು ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು