ನವದೆಹಲಿ: ದೇಶದಲ್ಲಿ ತೆಂಗು ಉತ್ಪಾದನೆಯ ಸ್ಪರ್ಧಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ತೆಂಗು ಉತ್ತೇಜನ ಯೋಜನೆ ಜಾರಿಗೆ ತರಲು ಮುಂದಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಕೋಕೋ, ಗೋಡಂಬಿ, ತೆಂಗಿನ ಕಾಯಿ ಬೆಳೆಗೆ ಬಜೆಟ್ನಲ್ಲಿ ಒತ್ತು ನೀಡಲಾಗಿದ್ದು, ಈ ಕ್ರಮದಿಂದ ಕರಾವಳಿ ಜಿಲ್ಲೆಗಳಿಗೆ ಇದು ಸಹಕಾರಿ, ರೈತರ ಆದಾಯವೂ ದ್ವಿಗುಣ ಆಗಲಿದೆ. ಇನ್ನು ಯುವಕರಿಗೆ ಉದ್ಯೋಗಕ್ಕೆ ಉತ್ತೇಜನ ಸಿಗಲಿದೆ.
ಈ ಯೋಜನೆಯಡಿ ಪ್ರಮುಖ ತೆಂಗು ಬೆಳೆಯುವ ರಾಜ್ಯಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಉತ್ಪಾದಕತೆಯಿಲ್ಲದ ಹಳೆಯ ತೆಂಗು ಮರಗಳನ್ನು ತೆಗೆದುಹಾಕಿ, ಅವುಗಳ ಸ್ಥಾನದಲ್ಲಿ ಉತ್ತಮ ಗುಣಮಟ್ಟದ ಹೊಸ ಸಸಿಗಳು ಅಥವಾ ತಳಿಗಳನ್ನು ನೆಡುವುದಕ್ಕೆ ವಿಶೇಷ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಇದಕ್ಕೂ ಜೊತೆಗೆ, ಭಾರತೀಯ ಗೋಡಂಬಿ (ಕಾಜು) ಮತ್ತು ಕೋಕೋ ಬೆಳೆಗಳಿಗಾಗಿ ಪ್ರತ್ಯೇಕ ಕಾರ್ಯಕ್ರಮವನ್ನು ರೂಪಿಸಲು ಸರ್ಕಾರ ಉದ್ದೇಶಿಸಿದೆ. ಇದರ ಮೂಲಕ ಕಚ್ಚಾ ಗೋಡಂಬಿ ಮತ್ತು ತೆಂಗು ಉತ್ಪಾದನೆ ಹಾಗೂ ಸಂಸ್ಕರಣೆಯಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವುದು, ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಹಾಗೂ 2030ರ ವೇಳೆಗೆ ಭಾರತೀಯ ಗೋಡಂಬಿ ಮತ್ತು ಭಾರತೀಯ ಕೋಕೋವನ್ನು ಜಾಗತಿಕ ಮಟ್ಟದ ಪ್ರೀಮಿಯಂ ಬ್ರ್ಯಾಂಡ್‌ಗಳಾಗಿ ರೂಪಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಈ ಯೋಜನೆಗಳು ರೈತರಿಗೆ ಹೆಚ್ಚಿನ ಆದಾಯವನ್ನು ಒದಗಿಸುವುದರ ಜೊತೆಗೆ, ದೇಶದ ಕೃಷಿ ಆಧಾರಿತ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲಿದೆ.

