ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 9 ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದು, ಈ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರಕ್ರಿಯೆಯನ್ನು ಸಂಸತ್ತಿನ ಆಚೆಗೂ ವಿಸ್ತರಿಸಿದ್ದಾರೆ. ಹಣಕಾಸು ಸಚಿವರು ದೇಶದಾದ್ಯಂತದ ಸುಮಾರು 30 ಕಾಲೇಜು ವಿದ್ಯಾರ್ಥಿಗಳೊಂದಿಗೆ ಇಂದು ಸಂವಾದ ನಡೆಸಲಿದ್ದಾರೆ.

ವಿದ್ಯಾರ್ಥಿಗಳು ಕೇಂದ್ರ ಬಜೆಟ್ ಅನ್ನು ಲೋಕಸಭೆಯ ಗ್ಯಾಲರಿಯಲ್ಲೇ ವೀಕ್ಷಿಸಿ ಬಳಿಕ ಕಾರ್ಯಕ್ರಮದಲ್ಲಿ ಸಚಿವರನ್ನು ಭೇಟಿಯಾಗಿ ಈ ಕುರಿತು ಸಂವಾದ ನಡೆಸಲಿದ್ದಾರೆ. ವಿದ್ಯಾರ್ಥಿಗಳ ತಂಡದಲ್ಲಿ ವಾಣಿಜ್ಯ, ಅರ್ಥಶಾಸ್ತ್ರ, ವೈದ್ಯಕೀಯ ಶಿಕ್ಷಣ ಮತ್ತು ವೃತ್ತಿಪರ ಅಧ್ಯಯನಗಳು ಸೇರಿದಂತೆ ವಿವಿಧ ವಿಭಾಗದವರು ಇದ್ದಾರೆ. ಪ್ರಾದೇಶಿಕ ಮತ್ತು ಶೈಕ್ಷಣಿಕ ದೃಷ್ಟಿಕೋನಗಳ ಮೂಲಕ ದೇಶದಾದ್ಯಂತ ವಿವಿಧ ರಾಜ್ಯಗಳಿಂದ 30 ವಿದ್ಯಾರ್ಥಿಗಳನ್ನು ಈ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.

ಬಜೆಟ್ 2026ರ ಮಂಡನೆ ಬಳಿಕ ಕರ್ತವ್ಯ ಭವನ-1ರಲ್ಲಿರುವ ಹಣಕಾಸು ಸಚಿವಾಲಯಕ್ಕೂ ವಿದ್ಯಾರ್ಥಿಗಳ ತಂಡ ಭೇಟಿ ನೀಡಲಿದೆ. ಸಚಿವಾಲಯದ ಕಾರ್ಯವೈಖರಿ, ನೀತಿ ರಚನೆ ಪ್ರಕ್ರಿಯೆಗಳು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಂಸ್ಥೆಗಳ ಪಾತ್ರದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ಕೂಡ ನಡೆಯಲಿದೆ.