ನವದೆಹಲಿ : ಕೇಂದ್ರ ಸರ್ಕಾರ ಗಾಂಧಿ ಹೆಸರಲ್ಲಿ ಹೊಸ ಯೋಜನೆ ಘೋಷಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಐತಿಹಾಸಿಕ 9 ನೇ ಬಾರಿಯ ಕೇಂದ್ರ ಆಯವ್ಯಯ ಮಂಡನೆಯಲ್ಲಿ ವಸ್ತ್ರ ಮತ್ತು ಜವಳಿ ಉದ್ಯಮಕ್ಕೆ ಕೊಡುಗೆ ನೀಡಿದ್ದಾರೆ.

ಕೇಂದ್ರ ಬಜೆಟ್‌ 2026ರಲ್ಲಿ ವಸ್ತ್ರೋದ್ಯಮವನ್ನು ಪ್ರಮುಖ ಕ್ಷೇತ್ರವಾಗಿ ಗುರುತಿಸಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದ್ದು, ದೇಶದಲ್ಲಿ ಹಲವು ಜಿಲ್ಲೆಗಳಲ್ಲಿ ಜವಳಿ ಕ್ಲಸ್ಟರ್‌ಗಳನ್ನು ಆಧುನೀಕರಿಸುವ ಉದ್ದೇಶದಿಂದ ವಸ್ತ್ರ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿ ಯೋಜನೆ ಜಾರಿಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ವಸ್ತ್ರೋದ್ಯಮದಲ್ಲಿ ಕೌಶಲ್ಯಾಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಸಮರ್ಥ್ 2.0 ಯೋಜನೆಯನ್ನು ಮುಂದುವರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಜೊತೆಗೆ ಸ್ಪರ್ಧಾತ್ಮಕ ಮಾದರಿಯಲ್ಲಿ ಮೆಗಾ ವಸ್ತ್ರ ಉದ್ಯಾನಗಳನ್ನು ಸ್ಥಾಪಿಸುವ ಪ್ರಸ್ತಾವವನ್ನೂ ಬಜೆಟ್‌ನಲ್ಲಿ ಮುಂದಿಟ್ಟಲಾಗಿದೆ.

ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಖಾದಿ ವಸ್ತ್ರ ಹಾಗೂ ಖಾದಿ ಕೈಗಾರಿಕೆಯನ್ನು ಬೆಂಬಲಿಸಲು ಮಹಾತ್ಮ ಗಾಂಧಿ ಗ್ರಾಮ ಸಮಾಜ ಯೋಜನೆ ಪ್ರಾರಂಭಿಸುವುದಾಗಿ ನಿರ್ಮಲಾ ಸೀತಾರಾಮನ್‌ ತಿಳಿಸಿದರು.