ಮುಂಬೈ: ವೇಗವಾಗಿ ಬಂದ ಟ್ರಕ್ ಹಾಗೂ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಗೋಂದಿಯಾ ಜಿಲ್ಲೆಯಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ನಗ್ರಾ ಪ್ರದೇಶದಲ್ಲಿ ಗೋಂದಿಯಾ-ಬಾಲಾಘಾಟ್ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅತಿವೇಗದಲ್ಲಿ ಬಂದ ಟ್ರಕ್ ಪಿಕಪ್ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪಿಕಪ್‌ನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಆರುಷ್ ಮಾತ್ರೆ, ಕಿರಣ್ ಸಂತೋಷ್ ವೈದ, ಸಂತೋಷ್ ಮಾತ್ರೆ, ಸುಶೀಲಾ ಮಾತ್ರೆ, ರೂಪ್ಸೇನ್ ಸತ್ಯಾಕರ್ ಹಾಗೂ ಜ್ಯೋತಿ ಸತ್ಯಾಕರ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಭೂಮೇಶ್ವರ್ ಮಾತ್ರೆ, ಸಂಗೀತಾ ಮಾತ್ರೆ, ರಾಜೇಂದ್ರ ಪಂಚಾಲೆ, ಲಕ್ಷ್ಮಿ ಪಂಚಾಲೆ, ಸಂತೋಷ್ ವೈದ, ರಾಕೇಶ್ ಬಹೆ ಹಾಗೂ ಪಿಕಪ್ ವಾಹನದ ಚಾಲಕ ಸಂದೀಪ್ ಬಹೆ ಎಂದು ಗುರುತಿಸಲಾಗಿದೆ. ಅಪಘಾತಕ್ಕೀಡಾದ ಎಲ್ಲರೂ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಕಾರ್ಮಿಕರಾಗಿದ್ದು, ಉದ್ಯೋಗಕ್ಕಾಗಿ ಹೈದರಾಬಾದ್‌ಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.