ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಉತ್ತಮ್ ನಗರದ ಜೆಜೆ ಕಾಲೋನಿಯಲ್ಲಿ ಹೋಳಿ ಬಲೂನ್ ನೀರು ಮಹಿಳೆಯೊಬ್ಬರ ಮೇಲೆ ಬಿದ್ದಿದ್ದರಿಂದ ಸಂಘರ್ಷ ಉಂಟಾಗಿದ್ದು, ಘಟನೆಯಲ್ಲಿ ತರುಣ್ (26) ಎಂಬ ಯುವಕ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ.

ಈ ಘಟನೆಯು ಎರಡು ಕುಟುಂಬಗಳ ನಡುವಿನ ಜಗಳದಿಂದಾಗಿ ಹಿಂಸಾತ್ಮಕ ರೂಪ ಪಡೆದುಕೊಂಡು, ಮಾರ್ಚ್ 4 ರಂದು ನಡೆದ ಈ ಹಲ್ಲೆಯಿಂದ ತರುಣ್ ಸಾವನ್ನಪ್ಪಿದ್ದರು. ಇದೀಗ ಪ್ರದೇಶದಲ್ಲಿ ಮೂರನೇ ದಿನವೂ ಉದ್ವಿಗ್ನತೆ ಮುಂದುವರೆದಿದ್ದು, ಪ್ರತಿಭಟನಾಕಾರರು ಎರಡು ವಾಹನಗಳಿಗೆ ಬೆಂಕಿ ಹಚ್ಚಿ, ಇನ್ನೆರಡು ವಾಹನಗಳ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಬುಧವಾರ ರಾತ್ರಿ 10.30 ರ ಸುಮಾರಿಗೆ ಹಿಂದೂ ಕುಟುಂಬದ 11 ವರ್ಷದ ಬಾಲಕಿ ತನ್ನ ಟೆರೇಸ್‌ನಲ್ಲಿ ಹೋಳಿ ಆಚರಿಸುತ್ತಿದ್ದಾಗ, ನೀರಿನ ಬಲೂನ್‌ಗಳನ್ನು ಕೆಳಗಿದ್ದ ಜನರ ಮೇಲೆ ಎಸೆದಿದ್ದಾಳೆ. ಈ ಬಲೂನ್‌ಗಳಲ್ಲಿ ಒಂದು ಮುಸ್ಲಿಂ ಮಹಿಳೆಗೆ ತಾಗಿದೆ, ಆಕೆ ಜಗಳ ಆರಂಭಿಸಿದ್ದಾಳೆ. ಈ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು, ಈ ಸಮಯದಲ್ಲಿ ಎರಡೂ ಕಡೆಯವರು ಪರಸ್ಪರ ಹಲ್ಲೆ ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮೃತರ ಚಿಕ್ಕಪ್ಪ ರಮೇಶ್ ಮಾತನಾಡಿ, 11 ವರ್ಷದ ಬಾಲಕಿ ಕುಟುಂಬ ಸದಸ್ಯರ ಮೇಲೆ ಬಲೂನುಗಳನ್ನು ಎಸೆಯುತ್ತಿದ್ದಳು, ಆದರೆ ಒಂದು ಬಲೂನು ನೆಲಕ್ಕೆ ಸಿಡಿದು, ಒಬ್ಬ ಮುಸ್ಲಿಂ ಮಹಿಳೆಗೆ ತಾಗಿದೆ “ನಾನು ಕ್ಷಮೆಯಾಚಿಸಿದೆ ಮತ್ತು 11 ವರ್ಷದ ಬಾಲಕಿ ಕ್ಷಮೆಯಾಚಿಸುವಂತೆ ಮಾಡಿದೆ. ನಾವು ಇನ್ನೇನು ಮಾಡಬಹುದಿತ್ತು? ಅವರು ಮೊದಲು ನಮ್ಮನ್ನು ಹೊಡೆದರು. ನನ್ನ ತಲೆ, ಎದೆ ಮತ್ತು ಕೈಗಳಿಗೆ ತೀವ್ರ ಗಾಯಗಳಾಗಿವೆ. ವೈದ್ಯರು ಎಂಟು ಹೊಲಿಗೆಗಳನ್ನು ಹಾಕಿದ್ದಾರೆ.ನನಗೆ ಇನ್ನೂ ನೋವು ಇದೆ. ತರುಣ್ ಅರ್ಧ ಗಂಟೆಯ ನಂತರ ಬಂದ. ಅವನು ತನ್ನ ಬೈಕು ನಿಲ್ಲಿಸುವ ಮೊದಲು, ಅವರು ಅವನ ಮೇಲೆ ಹಾರಿ ಅವನ ಮೇಲೆ ದಾಳಿ ಮಾಡಿದರು ಎಂದು ಅವರು ತಿಳಿಸಿದ್ದಾರೆ.