ಬೆಂಗಳೂರು: ನಗರದ ನಿಷೇಧಿತ, ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುತ್ತಿದ್ದವರ ವಿರುದ್ಧ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ನಿನ್ನೆ (ಮಾ.6) ಸಂಜೆಯಿಂದ ತಡರಾತ್ರಿವರೆಗೆ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 295 ಮಂದಿಗೆ ದಂಡ ವಿಧಿಸಲಾಗಿದೆ.
ನಗರದ ಉತ್ತರ ವಿಭಾಗಕ್ಕೆ ಒಳಪಡುವ 13 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈ ಪರಿಶೀಲನೆ ನಡೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಅಥವಾ ಬೀಡಿ ಸೇದುತ್ತಿದ್ದವರನ್ನು ಪತ್ತೆಹಚ್ಚಿದ ಪೊಲೀಸರು ಕೋಟ್ನಾ ಕಾಯ್ದೆಯಡಿ ಸುಮಾರು 40 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇದರ ಜೊತೆಗೆ ಅಂಗಡಿಗಳ ಪ್ರವೇಶದ ಬಳಿ ಧೂಮಪಾನ ಉತ್ಪನ್ನಗಳ ಜಾಹೀರಾತುಗಳನ್ನು ಅಕ್ರಮವಾಗಿ ಪ್ರದರ್ಶಿಸುತ್ತಿದ್ದ ವ್ಯಾಪಾರಿಗಳನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಯಿತು. ನಿಯಮ ಉಲ್ಲಂಘನೆ ಕಂಡುಬಂದ ಸ್ಥಳಗಳಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರಿಗೆ ದಂಡ ವಿಧಿಸಲಾಗಿದೆ.
ಈ ವಿಶೇಷ ಕಾರ್ಯಾಚರಣೆಗೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮೆಗೌಡ ನೇತೃತ್ವದಲ್ಲಿ ನಡೆದಿದೆ. ಮೂರು ಉಪವಿಭಾಗಗಳ ಎಸಿಪಿಗಳು, 13 ಠಾಣೆಗಳ ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳು ಹಾಗೂ ಸಿಬ್ಬಂದಿ ಭಾಗವಹಿಸಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದರು.

