ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಶನಿವಾರ ಗಡಿ ಭದ್ರತಾ ಪಡೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಐವರು ಗಾಯಗೊಂಡಿರುವ ಘಟನೆ ನಡೆದಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಎಸ್‌ಐ ಘರ್ ಸಿಂಗ್, ಕಾನ್‌ಸ್ಟೆಬಲ್‌ಗಳಾದ ಸುನಿಲ್ ಕುಮಾರ್, ಪಾರ್ಶುತಮ್ ಕುಮಾರ್, ಚಂದನ್ ಯಾದವ್‌ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಎಸ್‌ಎಫ್ ಬೆಂಗಾವಲಿನ ವಾಹನ ಜಮ್ಮು ಕಡೆಗೆ ತೆರಳುತ್ತಿತ್ತು. ಸ್ಥಳಕ್ಕೆ ಪೊಲೀಸರು, ರಕ್ಷಣಾ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ನಿವಾಸಿಯಾಗಿರುವ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.