ಜಮ್ಮು ನಗರದ ಹೊರವಲಯದಲ್ಲಿರುವ ಬಂಟಲಾಬ್‌ನ ಥಾಥ್ರಿ ಪ್ರದೇಶದಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಕುಸಿದು ಬಿದ್ದಿದ್ದು, ಘಟನೆಯಲ್ಲಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇತರ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಕಾರ್ಮಿಕರು ಸೇತುವೆಯ ಕೆಳಭಾಗದಲ್ಲಿ ಮತ್ತೊಂದು ಹಂತದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಈ ಆಕಸ್ಮಿಕ ಅಪಘಾತ ಸಂಭವಿಸಿದೆ. ಸೇತುವೆಯ ಮೇಲ್ಭಾಗದ ಭಾಗವು ಹಠಾತ್ತನೆ ಕುಸಿದ ಪರಿಣಾಮವಾಗಿ ಕೆಲಸ ಮಾಡುತ್ತಿದ್ದ ಆರು ಮಂದಿ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ನಾಗರಿಕ ಆಡಳಿತದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಯಿತು. ಸಂಜೆಯ ವೇಳೆಗೆ ಒಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿತ್ತು. ಕತ್ತಲೆಯ ನಡುವೆಯೂ ಮಣ್ಣು ತೆಗೆಯುವ ಯಂತ್ರಗಳ (JCB) ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ತಡರಾತ್ರಿಯವರೆಗೂ ಮುಂದುವರೆಯಿತು.
ಬೆಳಗಿನ ಜಾವ ಸುಮಾರು 1:30 ರ ಹೊತ್ತಿಗೆ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದ ಇನ್ನಿಬ್ಬರು ಕಾರ್ಮಿಕರ ಮೃತದೇಹಗಳನ್ನು ಹೊರತೆಗೆಯಲಾಯಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರು ರಾತ್ರಿಯಿಡೀ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಾಗರಿಕ ಆಡಳಿತದ ಅಧಿಕಾರಿಗಳು ಕೂಡ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸದ್ಯ ಅವಶೇಷಗಳ ಅಡಿಯಲ್ಲಿದ್ದ ಎಲ್ಲರನ್ನೂ ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

