News Karnataka Kannada
Saturday, April 27 2024
ಯುಎಇ

ದುಬೈ ಯಕ್ಷೋತ್ಸವ 2022: ಲಲಿತೋಪಖ್ಯಾನ – ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ

Dubai
Photo Credit : News Kannada

ದುಬೈ: ದುಬೈ ಯಕ್ಷಗಾನ ಅಭ್ಯಾಸ ತರಗತಿ(DYAT) ಪ್ರಾಯೋಜಿತ ಜೂ. 11, ಶನಿವಾರದಂದು ಜರಗಲಿರುವ ಅಭೂತಪೂರ್ವ ಕನ್ನಡ ಪೌರಾಣಿಕ ಯಕ್ಷಗಾನ ಪ್ರದರ್ಶನ ಲಲಿತೋಪಖ್ಯಾನ ದ ಪೂರ್ವಸಿದ್ಧತೆಗಳು ಭರದಿಂದ ಪೂರ್ಣಗೊಳ್ಳುತ್ತಿವೆ.

ಅಭ್ಯಾಗತರಾಗಿ ರಂಗದ ರಂಗೇರಿಸಲಿರುವ ಪ್ರಸಿದ್ಧ ಯುವ ಮಹಿಳಾ ಭಾಗವತರಾದ  ಅಮೃತ ಅಡಿಗ, ಮದ್ದಳೆಗಾರರಾದ  ಕೌಶಿಕ್ ರಾವ್ ಪುತ್ತಿಗೆ,  ಸವಿನಯ ನೆಲ್ಲಿತೀರ್ಥ, ಪ್ರಮುಖ ಸ್ತ್ರೀಪಾತ್ರದಲ್ಲಿ ರಂಜಿಸಲಿರುವ  ದೀಪಕ್ ರಾವ್ ಪೇಜಾವರ, ವಸ್ತ್ರಾಲಂಕಾರದ  ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ವರ್ಣಾಲಂಕಾರದ  ನಿತಿನ್ ಕುಂಪಲ ಮೊದಲಾದವರು ಈಗಾಗಲೇ ಯಕ್ಷಗಾನ ಅಭ್ಯಾಸ ತರಗತಿ ದುಬೈ ತಂಡವನ್ನು ಸೇರಿಕೊಂಡು ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಕ್ಷರಂಗದ ಮಿನುಗುತಾರೆ, ಸ್ವರಸಾಮ್ರಾಟರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಈ ವಾರ ನಮ್ಮನ್ನು ಸೇರಿಕೊಂಡು ಅಂತಿಮ ಹಂತದ ರೂಪುರೇಷೆ ನೀಡಲಿದ್ದಾರೆ.

ಅಭ್ಯಾಗತರನ್ನು ಸೇರಿ ದುಬೈಯಲ್ಲಿ ದಾಖಲೆಯ 49 ಮಂದಿ ಕಲಾವಿದರು ಸಂಚಾಲಕರಾದ ಕೊಟ್ಟಿಂಜ ದಿನೇಶ ಶೆಟ್ಟರ ನೇತೃತ್ವದಲ್ಲಿ ಸಂಯೋಜನೆಗೊಂಡು ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ತಂಡದ ಗುರುಗಳಾದ ಯಕ್ಷಮಯೂರ  ಶೇಖರ್ ಡಿ. ಶೆಟ್ಟಿಗಾರರ ನಿರ್ದೇಶನದಲ್ಲಿ, ನಾಟ್ಯಗುರು  ಶರತ್ ಕುಡ್ಲರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಸರ್ವ ಕಲಾವಿದರು ಸರಿಸುಮಾರು 72 ಪಾತ್ರಗಳನ್ನು ಕಲಾಭಿಮಾನಿಗಳ ಮುಂದೆ ಪ್ರದರ್ಶಿಸಲಿದ್ದಾರೆ.

ಬಹುಸಂಖ್ಯೆಯ ಸ್ವಯಂಸೇವಕರ ತಂಡ ರಂಗಸ್ಥಳ, ವೇಷಭೂಷಣ, ಆಸನ ವ್ಯವಸ್ಥೆ, ಅಲಂಕಾರ ಮುಂತಾದ ಸಿದ್ಧತೆ ಸಡಗರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ದುಬೈ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಚೊಚ್ಚಲ ಯಕ್ಷರಕ್ಷಾ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ, ಸಂಘಟಕ  ಪ್ರಭಾಕರ ಡಿ. ಸುವರ್ಣ ರಿಗೆ ಗಣ್ಯರ ಸಮಕ್ಷ ಪ್ರದಾನ ಮಾಡಲಾಗುವುದು.

ಜೂ. 11ರ, ಇಳಿಸಂಜೆ 4.00 ಗಂಟೆಗೆ ಸರಿಯಾಗಿ ಚೌಕಿಪೂಜೆ,  4.30ಕ್ಕೆ ಪೂರ್ವರಂಗ ಚೆಂಡೆ ಜುಗಲ್ಬಂದಿ, 5ಕ್ಕೆ ಸರಿಯಾಗಿ ಕಥಾರಂಭವಾಗಲಿದೆ. ಮಾತ್ರವಲ್ಲದೆ ರಾತ್ರಿ 9 ಗಂಟೆಗೆ ಸರಿಯಾಗಿ ಮಹಾದಾನಿಗಳ ನೆರವಿನಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ.

ಯು.ಎ.ಇಯ ಸಮಸ್ತ ಕಲಾಭಿಮಾನಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಕಲೆ- ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಿ ಭಗವದನುಗ್ರಹಕ್ಕೆ ಪಾತ್ರರಾಗಬೇಕೆಂದು, ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಮುದ್ರಣ- ಮಾಧ್ಯಮ- ಪ್ರಸಾರಗಳ ನೇತೃತ್ವ ವಹಿಸಿರುವ ಗಿರೀಶ್ ನಾರಾಯಣ್ ಕಾಟಿಪಳ್ಳ ಅವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು