ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿರುವ ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆಯು (DSM Hospital) ತನ್ನ ಡಯಾಲಿಸಿಸ್ ಘಟಕ ಆರಂಭವಾದ 2022ರ ಜನವರಿಯಿಂದ ಇಂದಿನವರೆಗೆ ಯಶಸ್ವಿಯಾಗಿ 10,000 ಡಯಾಲಿಸಿಸ್ ಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಮೂಲಕ ಮಹತ್ವದ ಆರೋಗ್ಯ ಸೇವಾ ಸಾಧನೆಯನ್ನು ದಾಖಲಿಸಿದೆ.
ಈ ಸಾಧನೆ ಗ್ರಾಮೀಣ ಹಾಗೂ ಹಿಂದುಳಿದ ಸಮುದಾಯಗಳಿಗೆ ಗುಣಮಟ್ಟದ ಮೂತ್ರಪಿಂಡ ಚಿಕಿತ್ಸೆಯನ್ನು ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಒದಗಿಸುವ ಆಸ್ಪತ್ರೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ದೇಶದ ಹೆಸರಾಂತ ಧಾರ್ಮಿಕ ಕೇಂದ್ರ ಕಟೀಲು, ಆಧುನಿಕ ಡಯಾಲಿಸಿಸ್ ಸೇವೆಗಳನ್ನು ನೀಡುವ ವಿಶೇಷ ಡಯಾಲಿಸಿಸ್ ಘಟಕ ಹೊಂದಿರುವ ಭಾರತದ ಅತೀ ಸಣ್ಣ ಪಟ್ಟಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಜನಸಂಖ್ಯೆ ಹಾಗೂ ಭೌಗೋಳಿಕವಾಗಿ ಸಣ್ಣ ಪಟ್ಟಣವಾಗಿದ್ದರೂ, ಈ ಆಸ್ಪತ್ರೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಸಮೀಪದ ಪ್ರದೇಶಗಳ ರೋಗಿಗಳಿಗೆ ಪ್ರಮುಖ ಗ್ರಾಮೀಣ ಡಯಾಲಿಸಿಸ್ ಕೇಂದ್ರವಾಗಿ ಬೆಳೆಯುತ್ತಿದೆ.
ಸ್ಥಳೀಯವಾಗಿ ಡಯಾಲಿಸಿಸ್ ಸೌಲಭ್ಯ ಲಭ್ಯವಾಗುವ ಮೊದಲು, ರೋಗಿಗಳು ಅಗತ್ಯ ಆರೋಗ್ಯ ಚಿಕಿತ್ಸೆಗೆ ವಾರದಲ್ಲಿ ಹಲವು ಬಾರಿ ಮಂಗಳೂರು ಅಥವಾ ಮಣಿಪಾಲಕ್ಕೆ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇತ್ತು . ಇಂದು ಆಸ್ಪತ್ರೆಯ ಐದು ಆಧುನಿಕ ಹೀಮೋಡಯಾಲಿಸಿಸ್ ಯಂತ್ರಗಳನ್ನು ಹೊಂದಿರುವ ವಿಶೇಷ ಘಟಕವು ರೋಗಿಗಳ ಮನೆ ಸಮೀಪವೇ ಸುಲಭ ಮತ್ತು ವಿಶ್ವಾಸಾರ್ಹ ಚಿಕಿತ್ಸೆ ಒದಗಿಸುತ್ತಿದೆ. ಇದರ ಪ್ರಯೋಜನ ಪಡೆಯುತ್ತಿರುವವರಲ್ಲಿ ರೈತರು, ದಿನಗೂಲಿ ಕಾರ್ಮಿಕರು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಪ್ರಮುಖರಾಗಿದ್ದಾರೆ.
ಸಮಾಜದ ಎಲ್ಲ ವರ್ಗದ ಜನರಿಗೆ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡಲು ಕಟೀಲು ಕೆ.ಎಂ.ಸಿ ಆಸ್ಪತ್ರೆ ಡಯಾಲಿಸಿಸ್ ಸೇವೆಯನ್ನು ಅತ್ಯಂತ ರಿಯಾಯತಿ ದರದಲ್ಲಿ ನೀಡುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರತಿ ಡಯಾಲಿಸಿಸ್ ಚಿಕಿತ್ಸೆಗೆ ₹300 ಹಾಗೂ ಇತರ ರೋಗಿಗಳಿಗೆ ₹600 ಮಾತ್ರ ವಿಧಿಸಲಾಗುತ್ತಿದೆ. ಈ ರಿಯಾಯತಿ ಮಾದರಿಯನ್ನು ಸಿ ಎಸ್ ಆರ್ ಪಾಲುದಾರರು ಮತ್ತು ದಾನಿಗಳ ಉದಾರ ಸಹಕಾರದಿಂದ ಸಾಧ್ಯವಾಗಿಸಲಾಗಿದೆ.
ಈ ಡಯಾಲಿಸಿಸ್ ಘಟಕವು ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ. ಮಯೂರ್ ಪ್ರಭು ಅವರ ಪರಿಣತಿ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತರಬೇತಿ ಪಡೆದ ನರ್ಸ್‌ಗಳು, ಡಯಾಲಿಸಿಸ್ ತಾಂತ್ರಿಕರು ಹಾಗೂ ಆರೋಗ್ಯ ಸಿಬ್ಬಂದಿಯ ಸಮರ್ಪಿತ ತಂಡ ಸೇವೆ ಸಲ್ಲಿಸುತ್ತಿದೆ. ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಖಚಿತಪಡಿಸಲು ಘಟಕದಲ್ಲಿ ಆಧುನಿಕ ಡಯಾಲಿಸಿಸ್ ತಂತ್ರಜ್ಞಾನ ಹಾಗೂ ಅಂತರರಾಷ್ಟ್ರೀಯ ಮಟ್ಟದ ನೀರು ಶುದ್ಧೀಕರಣ ವ್ಯವಸ್ಥೆ ಅಳವಡಿಸಲಾಗಿದೆ.
ಗ್ರಾಮೀಣ ಕರ್ನಾಟಕದಲ್ಲಿ ಕೈಗೆಟುಕುವ ದರದಲ್ಲಿ ಡಯಾಲಿಸಿಸ್ ಸೇವೆಗಳನ್ನು ಸಾಧ್ಯವಾಗಿಸಲು ಸಹಕರಿಸಿದ ಸಿ ಎಸ್ ಆರ್ ಪಾಲುದಾರರಾದ ಆಲ್ ಕಾರ್ಗೋ ಸಂಸ್ಥೆಯ ಶ್ರೀ ಶಶಿಕಿರಣ್ ಶೆಟ್ಟಿ, ಸಂಜೀವಿನಿ ಚಾರಿಟೆಬಲ್ ಟ್ರಸ್ಟ್‌ನ ಡಾ. ಸುರೇಶ್ ಎಸ್. ರಾವ್, ಶ್ರೀ ಜಗದೀಶ್ ಕುಮಾರ್ ನಂದನ್ ಎಂಟರ್ಪ್ರೈಸಸ್ ಮುಂಬೈ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಗಳಿಗೆ ಆಸ್ಪತ್ರೆ ಕೃತಜ್ಞತೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದುರ್ಗಾ ಸಂಜೀವಿನಿ ಮಣಿಪಾಲ (ಕಟೀಲು ಕೆ.ಎಂ.ಸಿ ) ಆಸ್ಪತ್ರೆಯ ಮುಖ್ಯ ಆಡಳಿತ ಅಧಿಕಾರಿ ಡಾ. ಶಿವಾನಂದ ಪ್ರಭು ಅವರು, “10,000 ಡಯಾಲಿಸಿಸ್ ಚಿಕಿತ್ಸೆಗಳು ಪೂರ್ಣಗೊಳ್ಳುವುದು ನಮ್ಮ ಪಾಲಿಗೆ ಕೇವಲ ಒಂದು ಸಂಖ್ಯೆ ಅಲ್ಲ. ಇದು ಸಾವಿರಾರು ಜೀವಗಳಿಗೆ ನೆರವಾದ ಹಾಗೂ ಸಂಕಷ್ಟದ ಸಮಯದಲ್ಲಿ ಕುಟುಂಬಗಳಿಗೆ ಬೆಂಬಲವಾದ ಮಹತ್ವದ ಸಾಧನೆ. ಗ್ರಾಮೀಣ ಭಾಗದ ಜನರು ದೂರ ಪ್ರಯಾಣ ಮಾಡದೆ ಹಾಗೂ ಹೆಚ್ಚಿನ ವೆಚ್ಚ ಭರಿಸದೆ ಗುಣಮಟ್ಟದ ಚಿಕಿತ್ಸೆ ಪಡೆಯಬೇಕು ಎಂಬುದೇ ನಮ್ಮ ಸದಾ ಉದ್ದೇಶವಾಗಿದೆ” ಎಂದು ಹೇಳಿದರು.
ಈ ಮಹತ್ವದ ಸಾಧನೆಯನ್ನು ಮುಂದುವರಿಸುತ್ತಾ, ಸ್ಥಳೀಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಮೂತ್ರಪಿಂಡ ಚಿಕಿತ್ಸೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆ ಮುಂದಿನ ತಿಂಗಳುಗಳಲ್ಲಿ ತನ್ನ ಡಯಾಲಿಸಿಸ್ ಘಟಕದ ಸಾಮರ್ಥ್ಯವನ್ನು ಐದು ಯಂತ್ರಗಳಿಂದ ಎಂಟು ಯಂತ್ರಗಳಿಗೆ ವಿಸ್ತರಿಸುವ ಯೋಜನೆಯನ್ನು ಘೋಷಿಸಿದೆ.

