ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕೆಡಿ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಸುದ್ದಿ ಮಾಡುತ್ತಿದ್ದು ಅವರ ಅವರ ವಿಭಿನ್ನ ಗೆಟಪ್ ಈಗ ಸಿನಿಪ್ರಿಯರ ಗಮನಸೆಳೆಯುತ್ತಿದೆ. ಅಭಿಮಾನಿಗಳು ಫಿದಾ ಆಗಿದ್ದಾರೆ.
ಹಾಗೆನೋಡಿದರೆ ಆರಂಭದಿಂದಲೂ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್ನಲ್ಲಿ ತಯಾರಾಗುತ್ತಿರುವ ಕೆಡಿ ಚಿತ್ರವು ಒಂದಿಲ್ಲೊಂದು ವಿಷಯಕ್ಕೆ ಸದ್ದು ಮಾಡುತ್ತಿದ್ದು, ಹಲವು ಕುತೂಹಲವನ್ನು ಕೆರಳಿಸಿದೆ. ಇದೆಲ್ಲದರ ನಡುವೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟೈಟಲ್ ಟೀಸರ್ ಸಾಕಷ್ಟು ಗಮನ ಸೆಳೆಯುತ್ತಿವೆ. ಸಿನಿಮಾವು 1970ರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನೈಜಘಟನೆಯನ್ನಾಧರಿಸಿದೆ. ಕೆ.ಡಿ .ನಾಯಕನ ನಿಕ್ ನೇಮ್. ವಿಶೇಷವಾಗಿ ಬಾಲಿವುಡ್ ನಟ ಸಂಜಯ್ ದತ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಕ ಪೇಮ್, ಅಣ್ಣಯ್ಯಪ್ಪ ಎಂಟರ್ ಪ್ರೈಸಸ್ ಕೆ.ಡಿ. ವಿಂಟೇಜ್ ಬ್ಯಾಟಲ್ ಫೀಲ್ಡ್ ಎಂಬ ಪೋಸ್ಟ್ ಹಾಕಿ ಕೆಡಿ ಚಿತ್ರದ ಮತ್ತೊಂದು ಪಾತ್ರವನ್ನು ಹೊಸ ವರ್ಷಕ್ಕೆ ಪರಿಚಯಿಸುವುದಾಗಿ ಹೇಳಿದ್ದರು. ಅಣ್ಣಯ್ಯಪ್ಪನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸುತ್ತಿದ್ದು, ಅವರ ವಿಭಿನ್ನ ಗೆಟಪ್ ಇರುವ ಲುಕ್ಕನ್ನು ನಿರ್ದೇಶಕ ಪ್ರೇಮ್ ಬಿಡುಗಡೆ ಮಾಡಿದ್ದಾರೆ.
ರೆಟ್ರೋ ಸ್ಟೈಲ್ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಧ್ರುವ ಸರ್ಜಾ ರೌಡಿಯಾಗಿ ನಟಿಸುತ್ತಿದ್ದಾರೆ. ಈ ಕೆಡಿಯ ಜತೆ ಇನ್ನಷ್ಟು ಕೆಡಿಗಳು ಸಹ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಮೂಲಕ ನಿಶಾ ವೆಂಕಟ್ ಕೋನಂಕಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸುಪ್ರೀತ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಕನ್ನಡ, ತೆಲಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಅದ್ದೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಕೆಡಿ, ಜೋಗಿಪ್ರೇಮ್ ನಿರ್ದೇಶನದ ೯ನೇ ಚಿತ್ರವೂ ಆಗಿದ್ದು, ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದೆ.