ಮಾಸ್ಟರ್ ಆನಂದ್ ಮಗಳಾದ ವಂಶಿಕಾ ಹೆಸರು ಬಳಸಿ ಮಹಿಳೆಯೊಬ್ಬರು 40 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ. ನಿಶಾ ಎಂಬ ಮಹಿಳೆಯಿಂದ ವಂಚನೆಯಾಗಿದ್ದು ಇದೀಗ ನಿಶಾ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಇದೀಗ ನಿಶಾ ಅವರನ್ನು ಬಂಧಿಸಲಾಗಿದೆ.
ಮಕ್ಕಳ ಟ್ಯಾಲೆಂಟ್ ಶೋ, ಮಕ್ಕಳ ಮಾಡೆಲಿಂಗ್, ಇವೆಂಟ್ ಮ್ಯಾನೇಜ್ಮೆಂಟ್, ಮಕ್ಕಳ ಗ್ರೂಮಿಂಗ್ ತರಗತಿ ಇತ್ಯಾದಿ ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ಹಣವನ್ನು ನಿಶಾ ವಸೂಲಿ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶಾರಿಂದ ಹಣ ಪಡೆದು ಮೋಸ ಹೋದ ಕೆಲವರು ನಿಶಾರ ವಿರುದ್ಧ ದೂರು ನೀಡಿರುವುದಲ್ಲದೆ ಫೇಸ್ಬುಕ್ನಲ್ಲಿಯೂ ಈ ಬಗ್ಗೆ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಮಾಸ್ಟರ್ ಆನಂದ್ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಹಲವರಿಗೆ ಮೋಸ ಮಾಡಿದ್ದಾರಂತೆ ನಿಶಾ ನರಸಪ್ಪ. ವಂಶಿಕಾ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಮಾರು 40 ಲಕ್ಷ ರೂಪಾಯಿ ಹಣವನ್ನು ನಿಶಾ ವಸೂಲಿ ಮಾಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಹಣ ಕಳೆದುಕೊಂಡವರು ಹಾಗೂ ವಂಶಿಕಾರ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಂಚನೆ ಹಣದಿಂದಲೇ ಐಶಾರಾಮಿ ಜೀವನವನ್ನು ನಿಶಾ ನರಸಪ್ಪ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.